ಸಾಲೆತ್ತೂರು: ಕೋಳಿ ಸಾಗಾಟದ ಪಿಕಪ್ ವಾಹನ ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

ಸಾಲೆತ್ತೂರು ಸಂಪರ್ಕಿಸುವ ಕಾಲೆಜಿಮಲೆ ಮೀಸಲು ಅರಣ್ಯದ ಒಳರಸ್ತೆಯಲ್ಲಿ ಕೋಳಿ ಸಾಗಾಟದ ಪಿಕಪ್ ವಾಹನವೊಂದು ಪಲ್ಟಿಯಾಗಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡು ನೋಂದಣಿಯ ಪಿಕಪ್ ವಾಹನವು ಕನ್ಯಾನ ಜಂಕ್ಷನ್‌ನಿಂದ ಹೊರಟು ಕಾಲೆಜಿಮಲೆ ಮೀಸಲು ಅರಣ್ಯದ ಮೂಲಕ ಕಡಿದಾದ ಗುಡ್ಡಗಾಡು ರಸ್ತೆಯಲ್ಲಿ ಚಲಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಿಕಪ್ ರಸ್ತೆ ಬದಿ ಪಲ್ಟಿಯಾಗಿದೆ.
ಅಪಘಾತದಲ್ಲಿ ವಾಹನದಲ್ಲಿದ್ದ ಹಲವು ಕೋಳಿಗಳು ಸಾವನ್ನಪ್ಪಿದ್ದು, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬದುಕುಳಿದ ಕೋಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಕ್ರೇನ್ ಬಳಸಿ ಪಲ್ಟಿಯಾದ ವಾಹನವನ್ನು ಮೇಲಕ್ಕೆತ್ತಲಾಯಿತು.