ಕ್ಲಾಸ್ ಆನ್ ವ್ಹೀಲ್ಸ್” ಲೈಫ್ ಟೈಮ್ ಪ್ರಾಯೋಜಕತ್ವ ವಹಿಸಿಕೊಂಡ ಅಲ್ ಮುಝೈನ್ ಬಾಸ್: ರಶೀದ್ ವಿಟ್ಲ
ತಂದೆ ಬಜ್ಪೆಗುತ್ತು ಶೇಕುಂಞಿ ಹಾಜಿ ಸ್ಮರಣಾರ್ಥ ಗ್ರಾಮೀಣ ಮಕ್ಕಳ ಕಲಿಕೆಗೆ ಸ್ಪೂರ್ತಿ ನೀಡಿದ ಝಕರಿಯಾ ಜೋಕಟ್ಟೆ
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನಿಯಮಿತ ಸರಕಾರೀ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಚಾರಿ ಬಸ್ ಮೂಲಕ ಉಚಿತ ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣ ಕೊಡಿಸುತ್ತಾ ಬರುತ್ತಿರುವುದು ನಿಮಗೆಲ್ಲಾ ಗೊತ್ತು.
“ಕ್ಲಾಸ್ ಆನ್ ವ್ಹೀಲ್ಸ್”
ಸಂಪೂರ್ಣ ಡಿಜಿಟಲೈಸ್ಡ್ ಹಾಗೂ ಹವಾನಿಯಂತ್ರಿತ ಬಸ್ಸು. ಅದರ ಒಳಗಡೆ 16 ಲ್ಯಾಪ್ ಟಾಪ್ ಹಾಗೂ 32 ಆಸನ ಹಾಗೂ ಡೆಸ್ಕ್ ಗಳಿದೆ. ಬಯೋಮೆಟ್ರಿಕ್ ಡಿವೈಸ್, ಸಿ.ಸಿ. ಕ್ಯಾಮರಾ. ಬಸ್ಸೊಳಗೆ ಇಬ್ಬರು ನುರಿತ ಕಂಪ್ಯೂಟರ್ ಅಧ್ಯಾಪಕರು ಮತ್ತು ಓರ್ವ ತಂತ್ರಜ್ಞ ಮತ್ತೋರ್ವ ಚಾಲಕ. ಹೀಗೇ ಒಟ್ಟು 4 ಸಿಬ್ಬಂದಿಗಳು.

ಬಸ್ಸು ಬಂದು ಸರಕಾರಿ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ನಿಲ್ಲುತ್ತದೆ. ಪ್ರತಿಯೊಂದು ವಿದ್ಯಾರ್ಥಿಗೆ ಹದಿನೈದು/ಎಂಟು ತಾಸು ಕೋರ್ಸ್ ಎಂಬ ಧ್ಯೇಯ. ವಾರ್ಷಿಕವಾಗಿ ಒಟ್ಟು ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಬೇಸಿಕ್ ತರಬೇತಿ..!
ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಕಾರದೊಂದಿಗೆ ಯಶಸ್ಚಿಯಾಗಿ ನಡೆದು ಬರುತ್ತಿರುವ ಈ ಸೇವೆಗೆ ಮಾಸಿಕ ಒಂದು ಲಕ್ಷ ರೂ. ಖರ್ಚು ತಗಲುತ್ತದೆ. ಇದನ್ನು ಇದುವರೆಗೂ ಎಂ. ಫ್ರೆಂಡ್ಸ್ ದಾನಿಗಳ ಸಹಕಾರದೊಂದಿಗೆ ಭರಿಸುತ್ತಾ ಬರುತ್ತಿತ್ತು. ಹಲವಾರು ಚಾರಿಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಇದು ಎಂ.ಫ್ರೆಂಡ್ಸ್ ಗೆ ದೊಡ್ಡ ಹೊರೆಯಾಗಿತ್ತು.


ಇದೀಗ ಎಂ.ಫ್ರೆಂಡ್ಸ್ ಚೆಯರ್ ಮ್ಯಾನ್ ಕೂಡಾ ಆಗಿರುವ ಜೋಕಟ್ಟೆ ಝಕರಿಯಾ ಹಾಜಿಯವರು ಇದರ ಮಾಸಿಕ ವೆಚ್ಚವನ್ನು ಸ್ವಂತ ವಹಿಸಿಕೊಂಡಿದ್ದಾರೆ. ತನ್ನ ತಂದೆ ಬಜ್ಪೆಗುತ್ತು ಮರ್ಹೂಂ ಹಾಜಿ ಬಿ. ಶೇಕುಂಞಿ ಬ್ಯಾರಿ ಸ್ಮರಣಾರ್ಥ ಜೀವನ ಪರ್ಯಂತ ಈ ಕೊಡುಗೆ ನೀಡುತ್ತಾ ಬರುವುದಾಗಿ ಇತ್ತೀಚೆಗೆ ದ.ಕ. ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಘೋಷಿಸುವ ಮೂಲಕ ಹಾಜಿಯವರು ಎಂ.ಫ್ರೆಂಡ್ಸ್ ಗೆ ಮಹದುಪಕಾರ ಮಾಡಿದ್ದಾರೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗಗಳಲ್ಲಿ ಅಪಾರ ಮಟ್ಟದ ಉದಾರ ಹಸ್ತ ನೀಡುತ್ತಿರುವ ಝಕರಿಯಾ ಹಾಜಿ ಮಾಸಿಕ ರೂಪಾಯಿ ಒಂದು ಲಕ್ಷ ವೆಚ್ಚವನ್ನು ನಿಗದಿತ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಂಪೂಟರ್ ಶಿಕ್ಷಣಕ್ಕಾಗಿ ಇದೇ ಜನವರಿಯಿಂದ ವಹಿಸಲಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿ ತಳಮಟ್ಟದಿಂದ ಶಿಖರಕ್ಕೇರಿದ ಜನಾಬ್ ಝಕರಿಯಾ ಹಾಜಿಯವರ ಜೀವನಗಾಥೆ ಒಂದು ವಿಸ್ಮಯ. ಮಂಗಳೂರಲ್ಲಿ ಬರೀ ನಾಲ್ಕು ರೂಪಾಯಿ ದಿನಗೂಲಿ ಕೆಲಸವನ್ನು ಕೂಡಾ ಮಾಡಿದ್ದ ಝಕರಿಯಾ ಹಾಜಿಯವರು ನಂತರ ಸೌದಿಗೆ ಉದ್ಯೋಗಾರ್ಥ ತೆರಳಿದ್ದರು. ಅಲ್ಲೂ ಕೂಡಾ ಕೆಲವು ಕಾಲ ಕಠಿಣ ದುಡಿಮೆ ನಡೆಸಿದ್ದರು. ಸಿಮೆಂಟ್ ಚೀಲವನ್ನು ಬೆನ್ನಿಗೇರಿಸಿ 25ನೇ ಮಹಡಿಗೆ ಸಾಗಿಸುವ ಕೂಲಿ ಕೆಲಸವನ್ನೂ ಮಾಡಿದ್ದಾರೆ. ಕ್ರಮೇಣ “ಅಲ್ ಮುಝೈನ್” ಸಂಸ್ಥೆಯನ್ನು ಸ್ಥಾಪಿಸಿ ತನ್ನ ಇಚ್ಛಾಶಕ್ತಿ, ಛಲ, ಸತತ ಪರಿಶ್ರಮದಿಂದ ಮುನ್ನೇರುತ್ತಾ ಬಂದ ಝಕರಿಯ್ಯಾ ಹಾಜಿಯವರು ಇಂದು ಎಂಟು ಸಾವಿರ ಮಂದಿ ದುಡಿಯುತ್ತಿರುವ ಬೃಹತ್ ಕಂಪೆನಿಯ ಬಾಸ್..!


ಓರ್ವ ವ್ಯಕ್ತಿ ಎಲ್ಲಿಂದ ಎಲ್ಲಿಗೆ ತಲುಪಬಹುದು ಎಂಬ ಅದ್ಭುತ ಯಶೋಗಾಥೆಗೆ ಜೀವಂತ ನಿದರ್ಶನವಾಗಿದ್ದಾರೆ ಝಕರಿಯಾ ಹಾಜಿಯವರು. ನಿಜಕ್ಕೂ ಇವರ ಜೀವನ ಚರಿತ್ರೆಯು ಒಂದು ಅದ್ಭುತ ಪಾಠವಾಗಿದೆ. ರೋಚಕ ಇತಿಹಾಸವಾಗಿದೆ.
ಆರ್ಥಿಕ, ಔದ್ಯಮಿಕ, ಜನಾದರಣೆಗಳ ವಿಷಯದಲ್ಲಿ ಎಂತಹವರೂ ಬೆರಗಾಗುವಂತಹ ಮೇರು ಮಟ್ಟ ತಲುಪಿದ್ದರೂ ತಾನು ನಡೆದು ಬಂದ ಹಾದಿಯನ್ನು ಮರೆಯದೆ ಇರುವುದು ಹಾಜಿಯವರ ಹೃದಯ ಶ್ರೀಮಂತಿಕೆಯಾಗಿದೆ. ಅವರ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯ ತೂಕ ಸ್ವಲ್ಪ ಹೆಚ್ಚೇ ಎಂದರೂ ತಪ್ಪಲ್ಲ. ಬಾಲ್ಯದಲ್ಲಿ ಬಡತನದ ದೆಸೆಯಿಂದಾಗಿ ಶಿಕ್ಷಣ ವಂಚಿತರಾಗಿದ್ದ ಇವರು ಅದರ ಕಹಿ ಅನುಭವವನ್ನು ನೆನಪಲ್ಲಿಟ್ಟಿದ್ದಾರೆ. ಹಾಗಾಗಿ ಯಾರೂ ಶಿಕ್ಷಣ ವಂಚಿತರಾಗಬಾರದು ಎಂಬುದು ಅವರ ಕಳಕಳಿ. ತಲೆಮೇಲೆ ಅಚ್ಚು ಬೆಲ್ಲ ಮತ್ತು ತಕ್ಕಡಿ ಹೊತ್ತುಕೊಂಡು ಮನೆಮನೆಗೆ ಮಾರಾಟ ಮಾಡಿದ್ದ ಬಾಲ್ಯಕಾಲದ ಅನುಭವವನ್ನು ಹೇಳಿಕೊಳ್ಳಲು ಅವರು ಸಂಕೋಚ ಪಡುವುದಿಲ್ಲ. ಸ್ವಪ್ರತಿಷ್ಠೆ, ಢಾಂಬಿಕತೆ ಎಂಬುದು ಅವರ ಡಿಕ್ಸನರಿಯಲ್ಲೇ ಇಲ್ಲ. ಎಲ್ಲವೂ ಸಹಜ, ಸಾದಾ ಸೀದಾ. ಅವರ ಮಧುರ ವ್ಯಕ್ತಿತ್ವವೇ ಕಷ್ಟದಲ್ಲಿರುವವರಿಗೆ ಸವಿಜೇನ ಸಿಂಚನ.
ಕಷ್ಟಕಾಲದ ಬಡತನದ ಅನುಭವದಿಂದ ಬಡವರ ಕಷ್ಟಕಾರ್ಪಣ್ಯಗಳನ್ನು ಕಂಡು ಮರುಗುತ್ತಾರೆ. ಸಹಾಯ ಹಸ್ತ ನೀಡುತ್ತಾರೆ. ಎಂಟು ಸಾವಿರ ಮಂದಿಗೆ ಉದ್ಯೋಗ ಕೊಟ್ಟು ಎಂಟು ಸಾವಿರ ಕುಟುಂಬಗಳಿಗೆ ಅನ್ನದಾತರಾಗಿದ್ದರೂ ಆ ಬಗ್ಗೆ ಯಾವುದೇ ತಲೆಭಾರವಿಲ್ಲದಿರುವುದು ಇವರ ಶಿರೋಧಾರ್ಯ ಗುಣ. ಹಣ ಯಾರಲ್ಲೂ ಇರ್ತದೆ, ತಮ್ಮ ಯಶೋಗಾಥೆಯ ಕಥೆ ಹೇಳುವ ಹಲವರಿರಬಹುದು. ಆದರೆ ಯಶೋದುಂಧುಬಿಯ ಜೊತೆಗೆ ವಿನಯ ಸಂಪನ್ನತೆ ಹೊಂದಿರುವವರು, ಕಷ್ಟಗಳಿಗೆ ಸ್ಪಂದಿಸುವವರು ಅಪರೂಪ. ಅಂತಹ ಅಪರೂಪದ ಅಧ್ಭುತ ವ್ಯಕ್ತಿಯಾಗಿದ್ದಾರೆ ಜನಾಬ್ ಝಕರಿಯಾ ಹಾಜಿಯವರು.
ಹಣ ಯಾರಿಗೂ ಕೈಗೂಡುತ್ತದೆ. ಆದರೆ ಗುಣ ಎಲ್ಲರಿಗೂ ಕೈಗೂಡುವುದಿಲ್ಲ. ಹಣವೂ ಗುಣವೂ ಜೊತೆಯಾಗಿರುವುದು ಒಂದು ವಿಶೇಷ ದೈವಾನುಗ್ರಹವಾಗಿದೆ. ಅಂತಹ ಒಂದು ವಿಶೇಷ ದೈವಾನುಗ್ರಹ ದೊರೆತ ಓರ್ವ ಅನುಗ್ರಹೀತ ಮಹನೀಯರಾಗಿದ್ದಾರೆ ಕರ್ನಾಟಕದ ರತ್ನ, ಜಿಲ್ಲೆಯ ಮುತ್ತು ಜನಾಬ್ ಝಕರಿಯಾ ಹಾಜಿಯವರು. ಆಯುರಾರೋಗ್ಯವೂ ಶಾಶ್ವತ ಸೌಭಾಗ್ಯವೂ ಇವರದ್ದಾಗಲಿ ಎಂಬುದು ನನ್ನ ಮನದುಂಬಿದ ಪ್ರಾರ್ಥನೆ.
-ರಶೀದ್ ವಿಟ್ಲ.




