ವಿಟ್ಲ: ಸಂತೆಯಿಂದ ಜನರಿಗೆ ತೊಂದರೆ, ಪ.ಪಂ ಗೆ ದೂರು: ಸಂತೆಗೆ ದಾಳಿ ನಡೆಸಿ, ಎಚ್ಚರಿಕೆ ನೀಡಿದ ಪಟ್ಟಣ ಪಂಚಾಯತ್

ವಿಟ್ಲ: ವಿಟ್ಲದ ಸಂತೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರ ದೂರಿನ ಮೇರೆಗೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ನಿಯೋಗ ದಾಳಿ ನಡೆಸಿ, ಎಚ್ಚರಿಕೆ ನೀಡಿದರು.
ವಿಟ್ಲದ ಪುರಭವನ ರಸ್ತೆಯಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದೆ. ಈ ರಸ್ತೆಯಲ್ಲಿ ಕೆಪಿಟಿಸಿಯಲ್ ಕೇಂದ್ರ, ಪೊಲೀಸ್ ವಸತಿಗೃಹ, ಬಿಲ್ಲವ ಸಮುದಾಯ ಭವನ, ವಿಟ್ಲ ವ್ಯವಸಾಯ ಸೇವಾ ಸಹಕರಿ ಸಂಘ ಹಾಗೂ ಜನ ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯಲ್ಲಿ ವ್ಯಾಪಾರಿಗಳು ಸಂತೆ ಇಟ್ಟು ವ್ಯಾಪಾರ ಮಾಡುತ್ತಿದ್ದರ ಪರಿಣಾಮ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರಾದ ಸುರೇಶ್ ಬನಾರಿ, ಮಹಮ್ಮದ್ ಗಮಿ, ಪ್ರಭಾಕರ್, ಶಿವರಾಮ ಮತ್ತಿತರರು ಪಟ್ಟಣ ಪಂಚಾಯತ್ ಗೆ ತೆರಳಿ ಮನವಿ ಸಲ್ಲಿಸಿ, ಸಂತೆಯನ್ನು ಸ್ಥಳಾಂತರ ಮಾಡಬೇಕು ಮತ್ತು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.
ಬಳಿಕ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಮುಖ್ಯಾಧಿಕಾರಿ ಕರುಣಾಕರ, ಸದಸ್ಯ ಜಯಂತ ಸಿ.ಎಚ್ ಅವರ ನಿಯೋಗ ತೆರಳಿ ರಸ್ತೆಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ಪುರಭವನ ಹಿಂಬದಿಯಲ್ಲಿ ಇರುವ ವಿಶಾಲವಾದ ಜಾಗದಲ್ಲಿ ಗಿಡಗಳು ಬೆಳೆದಿದ್ದು, ಅದನ್ನು ತಕ್ಷಣವೇ ಸ್ವಚ್ಛಗೊಳಿಸಿ, ಮುಂದಿನ ವಾರ ಈ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಸೂಚನೆ ನೀಡಿದರು.
