ಮಲದ ಗುಂಡಿಗಿಳಿದ ಕಾರ್ಮಿಕ ಉಸಿರುಗಟ್ಟಿ ಸಾವು
ಚಿತ್ರದುರ್ಗ: ಮಲದ ಗುಂಡಿಗಿಳಿದ ಕಾರ್ಮಿಕನೋರ್ವ ಉಸಿರುಗಟ್ಟಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ.
ಚಳ್ಳಕೆರೆ ಪಟ್ಟಣದಲ್ಲಿ ಡಿ.18ರಂದು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಳ್ಳಕೆರೆಯ ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಮೃತ ಕಾರ್ಮಿಕನೆಂದು ಗುರುತಿಸಲಾಗಿದೆ.
ಈ ಸಂಬಂಧ ಡಿ.23ರ ರಾತ್ರಿ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೀರಿನ ತೊಟ್ಟಿಯಲ್ಲಿ ಮುಳುಗಿ ಕಾರ್ಮಿಕ ಸಾವೆಂದು ತಿಳಿಸಲಾಗಿತ್ತು. ಈ ವೇಳೆ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದ ಡಿಸಿ ಕಚೇರಿಗೆ ದೂರು ಸಲ್ಲಿಸಿ, ತನಿಖೆಗೆ ಆಗ್ರಹಿಸಿದ ಪರಿಣಾಮ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.




