February 4, 2026

ಅಜಿಲಮೊಗರು ಮಾಲಿದ ಉರೂಸ್ ಸಮಾರಂಭ: ಕಡೇಶ್ವಾಲ್ಯದಿಂದ ಅಜಿಲಮೊಗರು ದೋಣಿಯಲ್ಲಿ ಪ್ರಯಾಣಿಸಲು ಜನರಿಂದ ಲೂಟಿ: ದುಬಾರಿ ದರ ಮತ್ತು ದೋಣಿಯಲ್ಲಿ ಬೇಕಾಬಿಟ್ಟಿ ಜನರನ್ನು ತುಂಬಿಸುವುದರ ವಿರುದ್ಧ ಕ್ರಮಕ್ಕೆ ಆಗ್ರಹ

0
image_editor_output_image-95813644-1734262754325

ಬಂಟ್ವಾಳ: ಇತಿಹಾಸ ಪ್ರಸಿದ್ಧ ಅಜಿಲಮೊಗೇರು ಮಾಲಿದ ಉರೂಸ್ ಪ್ರಾರಂಭಗೊಂಡಿದ್ದು, ಕಡೇಶ್ವಾಲ್ಯದಿಂದ ಅಜಿಲಮೊಗರು ದರ್ಗಾಕ್ಕೆ ತೆರಳುವ ಪ್ರಯಾಣಿಕರಿಂದ ದೋಣಿ ಮಾಲಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿದ್ದಾರೆ ಎಂದು ದೋಣಿ ಪ್ರಯಾಣಿಕರು ಆರೋಪಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಉರೂಸ್ ವೇಳೆ ಭಕ್ತಾದಿಗಳು ದರ್ಗಾ ಸಂಪರ್ಕಿಸಲು ದೋಣಿ ಬಳಸುತ್ತಿದ್ದರು. ಕಳೆದ ವರ್ಷ ಪ್ರತಿಯೊಬ್ಬ ಪ್ರಯಾಣಿಕರಿಗೆ 30 ರೂ. ದರ ಪಡೆಯುತ್ತಿದ್ದರು. ಆದರೆ ಈ ವರ್ಷ ಅಂದರೆ ಶನಿವಾರ 40 ರೂ. ಪಡೆಯುತ್ತಿದ್ದು, ಇಂದು ಭಾನುವಾರ 50 ರೂ. ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.


ಕಡೇಶ್ವಲ್ಯದಿಂದ ಅಜಿಲಮೊಗರು ಸಂಪರ್ಕಿಸಲು ದೋಣಿ ಬಳಕೆ ಅನಿವಾರ್ಯವಾಗಿದೆ. ಉರೂಸ್ ಸಮಾರಂಭದ ವೇಳೆ ಇಲ್ಲಿ ದೋಣಿ ಓಡಿಸುವವರು ಲಕ್ಷಾಂತರ ರೂ. ಸಂಪಾದನೆ ಮಾಡುತ್ತಾರೆ. ಅದಲ್ಲದೇ ಒಂದು ಬಾರಿ ಪ್ರಯಾಣಿಸುವ ವೇಳೆ ದೋಣಿಯಲ್ಲಿ ದನಗಳನ್ನು ತುಂಬಿಸಿದ ಹಾಗೇ ಜನರನ್ನು ಹತ್ತಿಸುತ್ತಿದ್ದಾರೆ. ಅನಾಹುತ ಸಂಭವಿಸಿದರೆ ಹೊಣೆ ಯಾರೂ ಎಂಬ ಪ್ರಶ್ನೆ ಉಂಟಾಗಿದೆ.

ಒಂದು ಬದಿಯಲ್ಲಿ ದರ್ಗಾ ಮತ್ತೊಂದು ಬದಿಯಲ್ಲಿ ದೇವಸ್ಥಾನ ಇದೆ. ಈ ಎರಡು ಕೇಂದ್ರವನ್ನು ಸಂಪರ್ಕಿಸಲು ದೋಣಿ ಬಳಕೆ ಅಗತ್ಯವಾಗಿದೆ. ಇದನ್ನು ಮನಗಂಡ ಅಂದಿನ ಶಾಸಕರಾದ ಬಿ. ರಮಾನಾಥ ರೈ ಅವರು ವಿಶೇಷ ಮುತುವರ್ಜಿ ವಹಿಸಿ ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿದ್ದರು. ಸೌಹಾರ್ಧ ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷಕ್ಕೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. ಇದನ್ನರಿತ ಇಲ್ಲಿಯ ದೋಣಿ ನಡೆಸುವವರು ಹೇಗದರೂ ಮಾಡಿ ಈ ಬಾರೀ ದುಬಾರಿ ದರದ ಮೂಲಕ ಹಣ ಮಾಡಬೇಕೆಂದು ದುರುದ್ದೇಶದಿಂದ ಈ ರೀತಿಯಾಗಿ ಜನರಿಂದ ವಸೂಲು ಮಾಡುತ್ತಿದ್ದಾರೆ ಎಂದು ದೋಣಿ ಪ್ರಯಾಣಿಕರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಇವರ ವಿರುದ್ಧ ಕ್ರಮ ಜರುಗಿಸಿ, ಕನಿಷ್ಠ ದರ ವಿಧಿಸಿ ದೋಣಿಯಲ್ಲಿ ಪ್ರಯಾಣಿಸಲು ಅನುಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!