March 18, 2026

ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ನಟ ದಿಲೀಪ್ ಗೆ ವಿಐಪಿ ದರ್ಶನ: ನ್ಯಾಯಾಲಯ ತರಾಟೆ

0
thenewsminute_2024-12-06_8vn2xu8k_Screenshot-2024-12-06-5.08.08-PM.jpeg

ಕೇರಳ: ಶಬರಿಮಲೆಯ ಸನ್ನಿಧಿಯಲ್ಲಿ ನಟ ದಿಲೀಪ್‌ಗೆ ವಿಐಪಿ ದರ್ಶನ ನೀಡಿದ್ದ ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ ಅಯ್ಯಪ್ಪನ ದರ್ಶನಕ್ಕೆ ಕೇರಳ ಹೈಕೋರ್ಟ್‌ ಚಾಟಿ ಬೀಸಿದೆ. ಶಬರಿಮಲೆಯಲ್ಲಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ನಟ ದಿಲೀಪ್‌ಗೆ ದರ್ಶನಕ್ಕೆ ಬಿಡಲಾಗಿದೆ.

ಈ ಬಗ್ಗೆ ಕೇರಳದ ಹೈಕೋರ್ಟ್, ಪೊಲೀಸ್ ಇಲಾಖೆ ಮತ್ತು ಟಿಡಿಬಿಯನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾ. ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾ. ಮುರಳಿ ಕೃಷ್ಣ ಎಸ್ ನೇತೃತ್ವದ ದ್ವಿಸದಸ್ಯ ಪೀಠ, ನಟನಿಗೆ ಯಾವ ಆಧಾರದ ಮೇಲೆ ವಿಶೇಷ ದರ್ಶನ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದ್ದು, ದಿಲೀಪ್ ದರ್ಶನ ಪಡೆದ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಆದೇಶಿಸಿದೆ.

ದಿಲೀಪ್ ಹಾಗೂ ಇತರರು ಪೊಲೀಸ್ ಬೆಂಗಾವಲಿನೊಂದಿಗೆ ಸನ್ನಿಧಾನ ಪ್ರವೇಶಿಸಿರುವುದನ್ನು ಗಮನಿಸಿದ ನ್ಯಾಯಾಲಯ, ”ವ್ಯಕ್ತಿಗಳು ಪೊಲೀಸ್ ಭದ್ರತೆಯೊಂದಿಗೆ ದರ್ಶನದ ಅವಕಾಶ ಹೇಗೆ ಪಡೆಯುತ್ತಾರೆ? ಶಬರಿಮಲೆಯಲ್ಲಿ ಏನು ನಡೆಯುತ್ತಿದೆ ?” ಎಂದು ಪ್ರಶ್ನಿಸಿದೆ.

ಶಬರಿಮಲೆ ವಿಶೇಷ ಭದ್ರತಾ ವಲಯ ಎಂದು ಪೀಠ ನೆನಪಿಸಿದೆ. ವಿಐಪಿ ಭೇಟಿಯ ಸಂದರ್ಭ ದೀರ್ಘ ಸಾಲಿನಲ್ಲಿ ಕಾಯುತ್ತಿದ್ದ ವೃದ್ಧರು ಹಾಗೂ ಮಕ್ಕಳು ಸರಿಯಾದ ದರ್ಶನ ಸಿಗದೆ ಹಿಂದಿರುಗಿದರು ಎಂದು ಪೀಠ ಹೇಳಿದೆ.

ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಪವಿತ್ರ ಹರಿವರಾಸನಂ ಮಂತ್ರ ಪೂರ್ಣಗೊಳ್ಳುವ ವರೆಗೆ ಶ್ರೀಕೋವಿಲ್ ಘಟಕದ ಮುಂದೆ ದಿಲೀಪ್ ಹಾಗೂ ಇತರರಿಗೆ ನಿಲ್ಲಲು ಅನುಮತಿ ನೀಡಿದವರು ಯಾರು? ಅವರಿಗೆ ಯಾವ ಹಕ್ಕು ಇದೆ? ಇತರ ಭಕ್ತರ ದರ್ಶನಕ್ಕೆ ಅಡ್ಡಿಪಡಿಸಿ ಅವರಿಗೆ ವಿಶೇಷ ಆತಿಥ್ಯವನ್ನು ಹೇಗೆ ನೀಡಲಾಯಿತು? ಎಂದು ಪ್ರಶ್ನಿಸಿದೆ.

ಮಂಡಲ-ಮಕರವಿಳಕ್ಕು ಉತ್ಸವದ ಸಂದರ್ಭ ಸನ್ನಿಧಾನಕ್ಕೆ ಭೇಟಿ ನೀಡಿದ ವಿಐಪಿಗಳಿಗೆ ಸಂಬಂಧಿಸಿ ದೇವಸ್ವಂ ಕಾರ್ಯನಿರ್ವಹಣಾಧಿಕಾರಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!