ಸಮಾಜದ ಉಳಿವಿಗೆ ಪ್ರತೀ ಕುಟುಂಬವೂ ಕನಿಷ್ಠ 3 ಮಕ್ಕಳನ್ನು ಪಡೆಯಬೇಕು: ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್
ನಾಗಪುರ: ದೇಶದಲ್ಲಿ ಜನಸಂಖ್ಯೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸಮಾಜದ ಉಳಿವಿಗೆ ಫಲವತ್ತತೆಯ ದರ 2.1ಕ್ಕಿಂತ ಹೆಚ್ಚಿರುವ ಅಗತ್ಯವಿದೆ. ಅದಕ್ಕಾಗಿ ಪ್ರತೀ ಕುಟುಂಬವೂ ಕನಿಷ್ಠ ಮೂರು ಮಕ್ಕಳನ್ನು ಪಡೆಯಬೇಕಿದೆ ಎಂದಿದ್ದಾರೆ.
ನಾಗಪುರದಲ್ಲಿ ನಡೆದ ಕಥಾಲೆ ಕುಲ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನಸಂಖ್ಯಾ ಶಾಸ್ತ್ರದ ಪ್ರಕಾರ ದೇಶದಲ್ಲಿ ಫಲವತ್ತತೆಯ ದರ ಕನಿಷ್ಠ 3 ಇರಬೇಕು. ಇದು 2.1ಕ್ಕಿಂತ ಕಡಿಮೆಯಾದರೆ ಅಂಥ ಸಮಾಜ ನಾಶವಾಗಲು ಬಾಹ್ಯ ಶಕ್ತಿಯ ಅಗತ್ಯವೇ ಇಲ್ಲ, ತನ್ನಿಂತಾನೇ ಅದು ನಶಿಸಿಹೋಗುತ್ತದೆ. ಇದನ್ನು ತಡೆಯಲು ಸಮಾಜದ ಪ್ರತೀ ಕುಟುಂಬವೂ ಕೊಡುಗೆ ನೀಡಬೇಕು. ನಮ್ಮಲ್ಲಿ ಹಲವಾರು ಭಾಷೆಗಳು ಹಾಗೂ ಸಂಸ್ಕೃತಿಗಳು ನಶಿಸಿ ಹೋಗಿದ್ದು ಕೂಡ ಹೀಗೆಯೇ ಎಂದಿದ್ದಾರೆ.
ನಮ್ಮ ದೇಶದ ಜನಸಂಖ್ಯಾ ನೀತಿಯೂ ಫಲವತ್ತತೆಯ ದರ 2.1ಕ್ಕಿಂತ ಕಡಿಮೆ ಆಗಬಾರದು ಎನ್ನುತ್ತದೆ. ಇಲ್ಲಿ 2.1 ಎಂದರೆ 2ಕ್ಕಿಂತ ಹೆಚ್ಚು, ಕನಿಷ್ಠ 3 ಮಕ್ಕಳು ಪಡೆಯಬೇಕು ಎಂದು ಜನಸಂಖ್ಯಾಶಾಸ್ತ್ರ ಹೇಳುತ್ತದೆ. ಆದರೆ 2021ರಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಈಗ ಭಾರತದಲ್ಲಿ ಮಹಿಳೆಯೊಬ್ಬಳು ಮಕ್ಕಳಿಗೆ ಜನ್ಮ ನೀಡುವ ಸರಾಸರಿ ಪ್ರಮಾಣ 2.2ರಿಂದ 2ಕ್ಕೆ ಇಳಿದಿದೆ. ಇತ್ತ ಶೇ. 54 ಇದ್ದ ಗರ್ಭ ನಿರೋಧಕ ಬಳ ಸು ವಿಕೆಯ ಪ್ರಮಾಣ ಶೇ.67ರಷ್ಟಾಗಿದೆ ಎಂದು ಭಾಗವತ್ ಹೇಳಿದ್ದಾರೆ.




