ವಯನಾಡ್: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಫೋಟೋ ಇರುವ ರೇಷನ್ ಕಿಟ್ ಜಪ್ತಿ
ವಯನಾಡ್: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಿತ್ರಗಳನ್ನು ಹೊಂದಿದ್ದ ಹಾಗೂ ಹಂಚಿಕೆಗೆ ಸಿದ್ಧವಾಗಿದ್ದ ಸುಮಾರು 30 ಆಹಾರ ಪೊಟ್ಟಣಗಳನ್ನು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿದ್ದಾರೆ.
ಗುರುವಾರ ಜಿಲ್ಲೆಯ ತೊಲ್ಪೆಟ್ಟಿ ಎಂಬಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಶಶಿಕುಮಾರ್ ನಿವಾಸದ ಬಳಿಯ ಹಿಟ್ಟಿನ ಗಿರಣಿಯಿಂದ ಇವನ್ನು ವಶಪಡಿಸಿಕೊಳ್ಳಲಾಗಿದೆ. ವಯನಾಡ್ ಲೋಕಸಭೆ ಉಪಚುನಾವಣೆಗೆ 11 ದಿನ ಬಾಕಿ ಇದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ. ಅವರ ಚಿತ್ರವಿರುವ ಆಹಾರ ಕಿಟ್ ಗಳು ಗುರುವಾರ ಪತ್ತೆಯಾಗಿದ್ದು, ಚುನಾವಣಾ ಆಯೋಗವು ವಶಪಡಿಸಿಕೊಂಡಿದೆ.
ಟೀ ಪುಡಿ, ಸಕ್ಕರೆ, ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳನ್ನು ಹೊಂದಿದ್ದ ಆಹಾರ ಪೊಟ್ಟಣಗಳ ಮೇಲೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಚಿತ್ರವೂ ಇದ್ದವು ಎಂದು ಮೂಲಗಳು ಹೇಳಿವೆ.
ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್), ‘ಆಹಾರ ಪೊಟ್ಟಣಗಳ ಹಂಚುವ ಕಾಂಗ್ರೆಸ್ ಯತ್ನ ಚುನಾವಣಾ ತಂತ್ರ’ ಎಂದು ಟೀಕಿಸಿದೆ. ಆದರೆ ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್, ಇವು ವಯನಾಡು ಭೂಕುಸಿತ ಸಂತ್ರಸ್ತರಿಗೆ ಹಂಚಲು ತಂದಿದ್ದ ಆಹಾರ ಪೊಟ್ಟಣಗಳು ಎಂದು ಹೇಳಿದೆ.