ಪುತ್ತೂರು: ರಿಕ್ಷಾ ಚಾಲಕನ ಮೇಲೆ ಹಲ್ಲೆ; ಆರೋಪಿ ವಶಕ್ಕೆ
ಪುತ್ತೂರು: ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ರಿಕ್ಷಾ ಚಾಲಕ ಕುಸುಮಾಧರ ಗೌಡ (33)ಅವರಿಗೆ ಕೆಯ್ಯೂರಿನಲ್ಲಿ ಮಾರುತಿ ಆಮ್ನಿಯಲ್ಲಿ ಬಂದ ವ್ಯಕ್ತಿಯೊಬ್ಬರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಕೆಯ್ಯೂರಿಗೆ ಬಾಡಿಗೆಗೆ ಬಂದು ವಾಪಸಾಗುತ್ತಿದ್ದ ಸಂದರ್ಭ ಫೋನ್ ಕರೆ ಬಂತೆಂದು ರಿಕ್ಷಾವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ ಹಿಂಬದಿಯಿಂದ ಬರುತ್ತಿದ್ದ ಮಾರುತಿ ಆಮ್ನಿ (ಕೆಎ19:ಈ 3067)ಯಲ್ಲಿದ್ದ ವ್ಯಕ್ತಿಯೊಬ್ಬರು ಅವಾಚ್ಯವಾಗಿ ಬೈದರು. ನಾನು ರಿಕ್ಷಾದಿಂದ ಇಳಿದು ಯಾಕೆ ಬೈಯುತ್ತೀರಿ ಎಂದು ಹೇಳುತ್ತಾ ಮುಂದೆ ಬಂದಾಗ ನನ್ನನ್ನು ತಡೆದು ರಸ್ತೆ ಬದಿಯಲ್ಲಿದ್ದ ಬಿಯರ್ ಬಾಟಲಿಯಂದ ಹಲ್ಲೆ ನಡೆಸಿದ್ದಾರೆ ಎಂದು ಕುಸುಮಾಧರ ಆರೋಪಿಸಿದ್ದಾರೆ.
ಆಗ ಅಲ್ಲೇ ಇದ್ದ ಸಾರ್ವಜನಿಕರು ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿದುಕೊಂಡಿದ್ದು, ಗಾಯಾಳುವನ್ನು ಪರಿಚಯದ ಮೇಘರಾಜ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.





