ಬಂಟ್ವಾಳ: ಯಮಸ್ವರೂಪಿ ಖಾಸಗಿ ಬಸ್ ಅವಾಂತರಕ್ಕೆ ಬೈಕ್ ಸವಾರ 30 ವರ್ಷದ ಯುವಕ ಬಲಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಸಂಚರಿಸುವ ಖಾಸಗಿ ಬಸ್ ಗಳಿಗೆ ಕಡಿವಾಣ ಯಾವಾಗ?

ಬಂಟ್ವಾಳ: ಇಲ್ಲಿನ ಕಡೆಗೋಳಿ ಎಂಬಲ್ಲಿ ಖಾಸಗಿ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಡೆಗೋಳಿ ನಿವಾಸಿ ಪ್ರವೀಣ (30) ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ಯಿಯಾಗಿದ್ದು, ಸ್ನೇಹಿತ ಸಂದೀಪ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಯಮ ಸ್ವರೂಪಿ ಬಸ್ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದು ಅಮಾಯಕ ಯುವಕನ ಬಲಿತೆಗೆದುಕೊಂಡ ಸೆಲಿನ ಬಸ್ ನ ಚಾಲಕ ಬಸ್ ನಿಂದ ಇಳಿದು ಪರಾರಿಯಾಗಿದ್ಧಾನೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಸೆಲಿನ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿದೆ.
ಖಾಸಗಿ ಬಸ್ ಚಾಲಕನ ಅತಿವೇಗದ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮ ಯುವಕನನ್ನು ಬಲಿಯಾಗಿದೆ ಎಂದು ಹೇಳಲಾಗಿದ್ದು, ಬಸ್ ಚಾಲಕನ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೀವ ತೆಗೆಯುವ ಖಾಸಗಿ ಬಸ್ ಗಳು, ಸ್ಥಳೀಯರ ಆಕ್ರೋಶ:
ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಸಿ.ಸಿ.ಬಸ್ ಗಳು ಅನೇಕ ಅಮಾಯಕರ ಬಲಿ ತೆಗೆದುಕೊಂಡಿದೆ. ಇಂದು ಅಪಘಾತಕ್ಕೆ ಕಾರಣವಾದ ಸೆಲಿನ ಬಸ್ ಸಹಿತ ಅನೇಕ ಖಾಸಗಿ ಬಸ್ ಗಳು ಎಲ್ಲೆ ಮೀರಿ ಸಂಚಾರ ಮಾಡುತ್ತಿದ್ದು, ಇವರ ಮೇಲೆ ಹಿಡಿತ ಸಾಧಿಸುವ ಆರ್.ಟಿ.ಒ ಇಲಾಖೆ ಹಾಗೂ ಟ್ರಾಫಿಕ್ ಪೋಲೀಸರು ಮೌನ ಮುರಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀ ವೇಗದಿಂದ ಮತ್ತು ಅಜಾಗರೂಕತೆಯಿಂದ ಸಂಚಾರ ಮಾಡುವ ಖಾಸಗಿ ಬಸ್ ಗಳ ಮೇಲೆ ಇಲಾಖೆಗಳು ಹಿಡಿತ ಸಾಧಿಸದಿದ್ದರೆ ಇನ್ನೆಷ್ಟು ಬಲಿಯಾಗಲಿದೆಯೊ ಗೊತ್ತಿಲ್ಲ.
ಅಪಘಾತ ಪಡಿಸಿದ ಖಾಸಗಿ ಬಸ್ ಚಾಲಕರ ಮೇಲೆ ಕಠಿಣವಾದ ಕಾನೂನು ಕ್ರಮವಾದರೆ ಮಾತ್ರ ಮುಂದಿನ ದಿನಗಳಲ್ಲಿ ಸಾವು ನೋವುಗಳು ಕಡಿಮೆಯಾಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.