ಡ್ರಿಂಕ್ ಆ್ಯಂಡ್ ಡ್ರೈವ್: ಶಾಲಾ ವಾಹನದ ವಿರುದ್ಧ ಪೊಲೀಸರ ಕಾರ್ಯಚರಣೆ: 108 ಚಾಲಕರ ವಿರುದ್ಧ FIR ದಾಖಲು
ಬೆಂಗಳೂರು: ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಮಾಡುವ ಚಾಲಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು, ಒಂಬತ್ತು ತಿಂಗಳಲ್ಲಿ 108 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಿಕ್ಕಿಬಿದ್ದ ಚಾಲಕರಿಗೆ ದಂಡ ವಿಧಿಸುವುದರ ಜತೆಗೆ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಅಲ್ಲದೇ, 679 ಶಾಲಾ ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಬಸ್‌ಗಳ ಮಾಲೀಕರು ಹಾಗೂ ಶಾಲೆಗಳ ಮುಖ್ಯಸ್ಥರಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಚಾಲಕರಿಗೆ 10 ಸಾವಿರದವರೆಗೂ ದಂಡ ವಿಧಿಸಲಾಗಿದ್ದು, ಶಾಲಾ ವಾಹನ ಚಾಲಕರಿಂದ ₹1.36 ಲಕ್ಷ ದಂಡ ವಸೂಲು ಮಾಡಲಾಗಿದೆ.
ಹಲವು ಖಾಸಗಿ ಶಾಲಾ ವಾಹನ ಚಾಲಕರು ಕೆಲಸದ ಅವಧಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ಸಿಗ್ನಲ್ ಜಂಪ್, ಅತಿವೇಗ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.