ನೈಜೀರಿಯಾದ ಡ್ರಗ್ ಪೆಡ್ಲರ್ ಬಂಧನ: ಬರೋಬ್ಬರಿ 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು: ಡ್ರಗ್ಸ್ ಮಾರಾಟ,ಸೇವನೆಯ ಆರೋಪದಡಿ ಸಿಸಿಬಿ ಪೊಲೀಸರು ನೈಜೀರಿಯಾ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ೨.೩೬ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ನೈಜರಿಯನ್ ಪ್ರಜೆ ಡ್ರಗ್ ಪೆಡ್ಲರ್ ಬೋನಿ ಫೇಸ್(೩೧) ಬಂಧಿತ ಆರೋಪಿಯಾಗಿದ್ದು, ಆತನಿಂದ ೨.೩೬ ಕೋಟಿ ಮೌಲ್ಯದ ೧ ಕೆಜಿ ೫೭೭ ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ಮೊಬೈಲ್, ಎಲೆಕ್ಟ್ರಾನಿಕ್ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಅ.೨೪ ರಂದು ಪರಪ್ಪನ ಅಗ್ರಹಾರದ ಶ್ರೀನಿಧಿ ಲೇಔಟ್ಸ್, ದೊಡ್ಡನಾಗಮಂಗಲದ ಮನೆಯೊಂದರಲ್ಲಿ ವಾಸವಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ವಿದೇಶಿ ನೈಜೀರಿಯಾ ಪ್ರಜೆ ೨೦೨೦ರ ಜನವರಿಯಲ್ಲಿ ಮೆಡಿಕಲ್ ವೀಸಾದಡಿಯಲ್ಲಿ ಭಾರತಕ್ಕೆ ಬಂದು ದೆಹಲಿ ಬಳಿಯ ಗ್ರೇಟರ್ ನೋಯ್ಡಾದಲ್ಲಿ ವಾಸವಾಗಿದ ಕ್ಷೌರಿಕ ಕೆಲಸ ಮಾಡಿಕೊಂಡಿರುತ್ತಾನೆ.
ಈ ಆರೋಪಿಗೆ, ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಓರ್ವ ವಿದೇಶಿ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಜೊತೆ ಸಂಪರ್ಕವಿದ್ದು, ಆಕೆಯಿಂದ ನಿಷೇದಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಪಡೆದು, ಆಕೆಯು ತಿಳಿಸುವ ಗಿರಾಕಿಗಳಿಗೆ ಹಾಗೂ ಆರೋಪಿಯು ಪರಿಚಯಸ್ಥ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.