ಮಂಗಳೂರು: ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ರಕ್ತದೊತ್ತಡದಿಂದ ನಿಧನ
ಮಂಗಳೂರು: ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಹಾವೇರಿ ಜಿಲ್ಲೆಯ ಮಾರುತಿ ಲಮಾಣಿ (36) ಅವರು ತೀವ್ರ ರಕ್ತದೊತ್ತಡದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ಮಾರುತಿ ಲಮಾಣಿ ಅವರು ಕಳೆದ ಆರು ವರ್ಷಗಳಿಂದ ಮಂಗಳೂರು ನಗರದ ಸಶಸ್ತ್ರ ನಗರ ಮೀಸಲು ಪಡೆ (ಸಿಎಆರ್)ಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಂಚಾರಿ ಉತ್ತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಕದ್ರಿ ಠಾಣೆ ಸೇರಿದಂತೆ ನಗರದ ಸಿಎಆರ್ ಕಚೇರಿಯಲ್ಲಿ ಹೆಚ್ಚಿನ ಅವಧಿಗೆ ಕರ್ತವ್ಯ ನಿರ್ವಹಿಸಿದ್ದರು. 2016ನೇ ಬ್ಯಾಚ್‌ನ ಪೊಲೀಸ್ ಸಿಬ್ಬಂದಿಯಾಗಿದ್ದ ಮಾರುತಿ ಲಮಾಣಿ ಅವರ ಪತ್ನಿಯೂ ಪೊಲೀಸ್ ಸಿಬ್ಬಂದಿಯಾಗಿದ್ದು, ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
ಎರಡು ದಿನಗಳ ಹಿಂದಷ್ಟೇ ರಾತ್ರಿ ಪಾಳೆಯ ಕರ್ತವ್ಯ ಮುಗಿಸಿ ಬಿಕರ್ನಕಟ್ಟೆಯಲ್ಲಿರುವ ತಮ್ಮ ನಿವಾಸಕ್ಕೆ ವಾಪಸ್ಸಾದ ಅವರು, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದಿದ್ದರು. ನಂತರ ಅವರ ಆರೋಗ್ಯದಲ್ಲಿ ಏಕಾಏಕಿ ಕುಸಿತ ಉಂಟಾಗಿದ್ದು, ಮನೆಯವರು ಅವರನ್ನು ತಕ್ಷಣ ನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ತೀವ್ರ ರಕ್ತದೊತ್ತಡ ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಸಂಚಾರಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಅಧಿಕಾರಿ ಗೋಪಾಲಕೃಷ್ಣ ಭಟ್ ಅವರ ಜೀಪ್‌ನಲ್ಲಿ ಹೆಚ್ಚಿನ ಸಮಯ ಕರ್ತವ್ಯ ನಿರ್ವಹಿಸಿದ್ದವರು ಎಂದು ತಿಳಿದುಬಂದಿದೆ.




