ಕಾಸರಗೋಡು: ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಅವಘಡ: 150 ಕ್ಕೂ ಅಧಿಕ ಮಂದಿ ಗಾಯ
ಕಾಸರಗೋಡು: ನೀಲೇಶ್ವರ ಬಳಿಯ ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ದೌಡಾಯಿಸಿದ್ದಾರೆ.





