ಸುರತ್ಕಲ್: ರಸ್ತೆ ಕಾಮಗಾರಿಗೆ ಅಗೆದಿದ್ದ ಹೊಂಡಕ್ಕೆ ಬಿದ್ದ ಬೈಕ್ ಸವಾರ
ಸುರತ್ಕಲ್: ಕಾನಾ- ಬಾಳ ರಸ್ತೆಯ ಸುಗ್ಗಿ ಬಾರ್ ಸಮೀಪ ಬಹಳ ದಿನಗಳಿಂದ ಇದ್ದ ಹೊಂಡಕ್ಕೆ ಯುವಕನೋರ್ವ ದ್ವಿಚಕ್ರ ವಾಹನದೊಂದಿಗೆ ಬಿದ್ದು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಕಾಟಿಪಳ್ಳ 1ನೇ ಬ್ಲಾಕ್ ನಿವಾಸಿ ಧನುಷ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಈತ ಸುರತ್ಕಲ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸಹೋದರಿಗೆ ಮನೆಯಿಂದ ಊಟ ನೀಡಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಯಾಳು ಯುವಕ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿ ಇರುವ ಗುಂಡಿಯ ಬಳಿ ಬ್ಯಾರಿಕೆಟ್ ಇಡಲಾಗಿತ್ತಾದರೂ ಅದಕ್ಕೆ ಯಾವುದೇ ರಿಫ್ಲೆಕ್ಟರ್ ಸ್ಟಿಕ್ಕರ್ ಅಳವಡಿಸಲಾಗಿರಲಿಲ್ಲ. ಹೀಗಾಗಿ ಯುವಕನಿಗೆ ಬ್ಯಾರಿಕೇಟ್ ಮತ್ತು ಗುಂಡಿ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಸುಗ್ಗಿ ಬಾರ್ & ರೆಸ್ಟೋರೆಂಟ್ ಬಳಿ ಹೈಮಾಸ್ಟ್ ದೀಪ ಇತ್ತು. ಈಗ ಅದನ್ನು ತೆರವುಗೊಳಿಸಿ ಗ್ಯಾಸ್ ಸಾಗಾಟದ ಬುಲೆಟ್ ಟ್ಯಾಂಕರ್ ಗಳು ಪಾರ್ಕಿಂಗ್‌ಗೆ ಹೋಗಲು ರಸ್ತೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.




