ಉಪ್ಪಿನಂಗಡಿ: ಜಾನುವಾರು ಹತ್ಯೆ ಮಾಡಿ ಮಾಂಸ ಮಾರಾಟ ಪ್ರಕರಣ: ತಲೆ ಮರೆಸಿಕೊಂಡ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
ಪುತ್ತೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕಿನ 34-ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಕಜೆ ಎಂಬಲ್ಲಿ ಖತೀಜಮ್ಮ ಎಂಬವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪಡೆದ ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸ್ಥಳಕ್ಕೆ ದಾಳಿ ಮಾಡಿದಾಗ ಅಲ್ಲಿದ್ದ ಆರೋಪಿಗಳು ಸ್ಥಳದಿಂದ ಓಡಿ ಪರಾರಿಯಾಗಿದ್ದರು.
ಸದ್ರಿ ಆರೋಪಿಗಳ ವಿರುದ್ಧ ಕರ್ನಾಟಕ ಗೋ ಹತ್ಯೆ ನಿಷೇದ ಕಾಯ್ದೆ-2020ರ ಕಲಂ 12 ಮತ್ತು ಕಲಂ 3(5) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು. ಸ್ಥಳದಿಂದ ಓಡಿ ಪರಾರಿಯಾಗಿ ತಲೆ ಮರೆಸಿಕೊಂಡ ಆರೋಪಿಗಳಾದ ರಫೀಕ್, ಉಬೈದ್, ಅಶ್ರಫ್ ಮತ್ತು ನಿಜಾಮುದ್ದೀನ್ ಎಂಬುವವರು ತಮ್ಮ ವಕೀಲರ ಮುಖಾಂತರ ನಿರೀಕ್ಷಣಾ ಜಾಮೀನು ಕೋರಿ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಸರಿತಾ ಡಿ. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿ ಇಬ್ರಾಹಿಂ ಬಾತಿಷಾ ಯು.ಕೆ. ವಾದಿಸಿದ್ದರು.




