ಕಾರಿನಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಗ್ರಾನೈಟ್ ಉದ್ಯಮಿಯ ಮೃತದೇಹ ಪತ್ತೆ

ಬೆಳಗಾವಿ: ಇಲ್ಲಿನ ಮುಲ್ಲಾ ಪ್ಲಾಟ್ ನಿವಾಸಿ, ಗ್ರಾನೈಟ್ ಉದ್ಯಮಿ ಫೈರೋಜ್ ಬಡಗಾಂವಿ (40) ಅವರ ಶವ ಬುಧವಾರ, ಕಾರಿನಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕ ಅವರ ಕಾರು ಬೆಂಕಿಗೆ ಆಹುತಿಯಾಗಿದೆ.
ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಚಾಲಕನ ಸೀಟಿನಲ್ಲಿ ಕುಳಿತಿದ್ದ ಫೈರೋಜ್ ಕೂಡ ಬೆಂದುಹೋಗಿದ್ದಾರೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಹಗಲು- ರಾತ್ರಿ ನಿರಂತರವಾಗಿ ವಾಹನಗಳ ಓಡಾಟ ಇದ್ದೇ ಇರುತ್ತದೆ. ಆದರೂ ಬೆಂಕಿಯನ್ನು ಯಾರೂ ಏಕೆ ಗಮನಿಸಿಲ್ಲ ಎಂಬುದು ಸಂದೇಹಕ್ಕೆ ಕಾರಣವಾಗಿದೆ. ಬುಧವಾರ ಮಧ್ಯಾಹ್ನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೂಡ ಭೇಟಿ ನೀಡಿ ಪರಿಶೀಲಿಸಿದರು.