ಸೆ.8ರಂದು ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ
ವಿಟ್ಲ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರದ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಕಾರ್ಯಾಲಯ ಉದ್ಘಾಟನೆ ಸೆ. 8ರ ಭಾನುವಾರ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಅಮೈ ವಸಂತ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವಾಹ್ನ ಕಂಬಳಬೆಟ್ಟು ಧರ್ಮನಗರ ಜಯದುರ್ಗಾಪರಮೇಶ್ವರಿಗೆ ಮತ್ತು ಮಹಾಗಣಪತಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಲಾಗುವುದು. ಅನಂತರ ಇಡ್ಕಿದು ಸೇವಾ ಸಹಕಾರಿ ಸಂಘದ ಕಟ್ಟಡದಲ್ಲಿ ಧರ್ಮನಗರ ಧರ್ಮಸೇವಾ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉರಿಮಜಲು ಸುಬ್ರಹ್ಮಣ್ಯ ಭಟ್ ಕಾರ್ಯಾಲಯ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಖಾತೆಗೆ ಚಾಲನೆ ನೀಡಲಾಗುವುದು ಎಂದರು.
ರಾತ್ರಿ ಧರ್ಮನಗರ ಗಣೇಶೋತ್ಸವದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಮತ್ತು ರಶೀದಿ ಪುಸ್ತಕವನ್ನು ವೇದಮೂರ್ತಿ ಗೋಪಾಲಕೃಷ್ಣ ಭಟ್ ಬಿಡುಗಡೆ ಮಾಡುವರು ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೂಡಾಯಿಮಾರು ಸತೀಶ್ ಶೆಟ್ಟಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಬೀಡಿನಮಜಲು ಸುಧಾಕರ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ ಧರ್ಮನಗರ, ಕಾರ್ಯದರ್ಶಿ ಧನರಾಜ್ ಅಮೈ ಉಪಸ್ಥಿತರಿದ್ದರು.





