ಉಳ್ಳಾಲ: ಉಳ್ಳಾಲ ನಗರಸಭೆಯ ಪೌರಾಯುಕ್ತೆಯ ದಿಢೀರ್ ಎತ್ತಂಗಡಿ
ಉಳ್ಳಾಲ: ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಪ್ರಸ್ತುತ ಉಳ್ಳಾಲ ನಗರಸಭೆಯ ಪ್ರಭಾರಿ ಪೌರಾಯುಕ್ತಯಾಗಿ ಝಂಡಾ ಊರಿದ್ದ ವಾಣಿ ಆಳ್ವರನ್ನ ದಿಢೀರನೇ ಎತ್ತಂಗಡಿ ಮಾಡಲಾಗಿದೆ.
ನಗರ ವ್ಯಾಪ್ತಿಯ ಮಂಚಿಲ ಎಂಬಲ್ಲಿನ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಸೆಟ್ ಬ್ಯಾಕ್ ಇಲ್ಲದ ತಕರಾರಿನ ವ್ಯಾಜ್ಯವು ಕಳೆದ ಒಂಭತ್ತು ವರುಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ವಾಣಿ ಆಳ್ವ ಅವರು ಕಳೆದ ಶನಿವಾರ ಯಾವುದೇ ನೋಟೀಸು ನೀಡದೆ ಪೊಲೀಸರು ಮತ್ತು ಅಧಿಕಾರಿಗಳನ್ನ ಬಳಸಿ ಕಟ್ಟಡವನ್ನ ಜಪ್ತಿಗೊಳಿಸಿ ದರ್ಪ ಮೆರೆದಿದ್ದು ಕಟ್ಟಡ ಮಾಲಕರು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಧಿಕಾರಿಣಿ ದರ್ಪ ಮೆರೆದ ವೀಡಿಯೋ ಚಿತ್ರಣವನ್ನು ಕಟ್ಟಡ ಮಾಲಕರು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆನ್ನಲಾಗಿದೆ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ವಾಣಿ ಆಳ್ವರನ್ನ ಉಳ್ಳಾಲದ ಪ್ರಭಾರ ಪೌರಾಯುಕ್ತ ಸ್ಥಾನದಿಂದ ತೆರವುಗೊಳಿಸಿ, ಆ ಸ್ಥಾನಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರನ್ನ ಮುಂದಿನ ಆದೇಶದ ವರೆಗೆ ಪ್ರಭಾರಿಯನ್ನಾಗಿ ನೇಮಕಗೊಳಿಸಿದ್ದಾರೆ.





