ಕೊಣಾಜೆ: ಮಹಿಳೆಯ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ
ಕೊಣಾಜೆ: ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಕಳ್ಳರನ್ನು ಕೊಣಾಜೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನವಾಝ್ ಯಾನೆ ನವ್ವ(32), ನಿಯಾಫ್ ಯಾನೆ ನಿಯಾ(28) ಬಂಧಿತರು. ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬವರು ಆಗಸ್ಟ್ 16 ರಂದು ಮುದುಂಗಾರು ಕಟ್ಟೆ ಶಾಲಾ ಹಿಂಭಾಗದ ಪರಿಸರದಲ್ಲಿ ಸೊಪ್ಪು ಕೊಯ್ಯುತ್ತಿದ್ದರು.
ಈ ವೇಳೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಆಗಂತುಕರು ಅವರ ಸುಮಾರು ಒಂದೂವರೆ ಪವನ್ ನ ಬಂಗಾರದ ಸರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡಿಸಿದ್ದರು. ಸಿಸಿಟಿವಿಗಳ ಪರಿಶೀಲನೆಯಿಂದ ಕಳ್ಳರ ಸುಳಿವು ಸಿಕ್ಕಿತ್ತು.
ಖದೀಮರ ಜಾಡು ಹಿಡಿದು ಹೊರಟ ಪೊಲೀಸರು ಕಳ್ಳತನ ನಡೆದ ಎರಡೇ ದಿನದಲ್ಲಿ ಕೈರಂಗಳ ಗ್ರಾಮದ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 10 ಗ್ರಾಂ ಬಂಗಾರ ಹಾಗೂ ಡಿಯೋ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.




