ಜೈಲಿನಿಂದ ತಪ್ಪಿಸಿಕೊಂಡಿದ್ದ ಖೈದಿಯನ್ನು 14 ವರ್ಷಗಳ ಬಳಿಕ ಬಂಧನ
ಕೊಪ್ಪಳ: ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧಿಯಾಗಿ 2010 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಇಲಕಲ್ ಮೂಲದ ನಿವಾಸಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಎಂಬ ಖೈದಿಯನ್ನು ಜಿಲ್ಲಾ ಪೊಲೀಸರು ಬರೊಬ್ಬರಿ 14 ವರ್ಷಗಳ ಬಳಿಕ ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.
ವಿಚಾರಣಾ ಖೈದಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಇಲಕಲ್ ನಿವಾಸಿಯಾಗಿದ್ದ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ದ 2009ರಲ್ಲಿ ಕೇಸ್ ದಾಖಲಾಗಿತ್ತು. ಈತನನ್ನು ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧಿಯಾಗಿದ್ದನು. ಈತನ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿತ್ತು. ಆದರೆ ಈ ಖೈದಿ 2010ರ ಮೇ.04 ರಂದು ಜೈಲಿನಿಂದ ತಪ್ಪಿಸಿಕೊಂಡು ಎಲ್ಲೋ ತಲೆಮರೆಸಿಕೊಂಡಿದ್ದ.
ಈ ಪ್ರಕರಣದ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ 2010ರಲ್ಲಿ ತಲೆಮರೆಸಿಕೊಂಡ ಕುರಿತಂತೆ ಮತ್ತೊಂದು ಪ್ರಕರಣವೂ ದಾಖಲಾಗಿತ್ತು. ಈ ಖೈದಿಯ ಪತ್ತೆಗೆ ಜಾಲ ಬೀಸಿದ್ದ ಪೊಲೀಸ್ ಪಡೆಯು ಬರೊಬ್ಬರಿ 14 ವರ್ಷಗಳ ಬಳಿಕ ಕೈದಿ ಮಾರ್ಕಂಡಯ್ಯ ಬಂಧಿಸಿದೆ.




