ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭ
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗ ವಿಭಾಗದ ಕಡಗರವಳ್ಳಿ ಮತ್ತು ಎಡಕುಮೇರಿ ನಿಲ್ದಾಣಗಳ ನಡುವಿನ ಹಳಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ರೈಲು ಸಂಚಾರ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯಕ್ಕೆ ಗಂಟೆಗೆ 15 ಕಿ.ಮೀ ವೇಗದ ನಿರ್ಬಂಧ ಹೇರಲಾಗಿದೆ.
ಭಾರೀ ಮಳೆಯ ಪರಿಣಾಮ ಕಡಗರವಳ್ಳಿ ಮತ್ತು ಎಡಕುಮೇರಿ ನಿಲ್ದಾಣಗಳ ನಡುವಣ ಹಳಿಯಲ್ಲಿ ಭೂ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮಂಗಳೂರು- ಹಾಸನ ಮಧ್ಯೆ ಕಳೆದ ಕೆಲವು ದಿನಗಳಿಂದ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪದೇ ಪದೇ ಸುರಿಯುತ್ತಿದ್ದ ಮಳೆ ಹಳಿ ದುರಸ್ತಿ ಕೆಲಸಕ್ಕೆ ಸವಾಲು ಒಡ್ಡಿತ್ತು. ಆದರೂ ದುರಸ್ತಿಯಲ್ಲಿ ನಿರತವಾಗಿದ್ದ ತಂಡಗಳು ದಣಿವರಿಯದೆ ಶ್ರಮಿಸಿದ್ದವು.
ಆಗಸ್ಟ್ 4 ರಂದು ದುರಸ್ತಿ ಕಾಮಗಾರಿ ಪೂರ್ಣಗೊಂಡು ಟ್ರ್ಯಾಕ್ ಅನ್ನು ಗೂಡ್ಸ್ ರೈಲಿಗೆ ಮಾತ್ರ ‘ಫಿಟ್’ ಎಂದು ಪ್ರಮಾಣೀಕರಿಸಲಾಗಿತ್ತು. ಬಳಿಕ ಹಳಿಗಳ ಸುರಕ್ಷತೆಯನ್ನು ಖಾತರಿ ಪಡಿಸಲು ಎಂಜಿನ್ ರೋಲಿಂಗ್ ಪರೀಕ್ಷೆ ನಡೆಸಲಾಯಿತು.




