ಸುರತ್ಕಲ್: ಭಾರೀ ಗಾಳಿ ಮಳೆ; ಹಲವೆಡೆ ಹಾನಿ
ಮಂಗಳೂರು: ಶುಕ್ರವಾರ ಸಂಜೆ ಜೋರಾಗಿ ಸುರಿದ ಗಾಳಿ ಸಹಿತ ಮಳೆಗೆ ಸುರತ್ಕಲ್ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಮಳೆಯ ಜೊತೆ ಜೋರಾಗಿ ಗಾಳಿ ಬೀಸಿದ್ದು, ಮರಗಳು ಗಾಳಿಯ ಹೊಡೆತಕ್ಕೆ ಸಿಲುಕಿ ಉರುಳಿ ಬಿದ್ದಿದೆ. ಬಿರುಗಾಳಿಯಂತ ಗಾಳಿ ಬೀಸುವುದನ್ನು ನೋಡಿದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ರಕ್ಷಣೆ ಪಡೆದುಕೊಂಡಿದ್ದಾರೆ. ಆದ್ರೆ, ಚೊಕ್ಕಬೆಟ್ಟು ಬಳಿ ಮನೆಯ ಹೆಂಚುಗಳು ಹಾರಿ ಹೋಗಿ ಮನೆಯಲ್ಲಿದ್ದ ಮಗು ಸಹಿತ ಇಬ್ಬರಿಗೆ ಗಾಯವಾದ ಬಗ್ಗೆ ವರದಿಯಾಗಿದೆ.
ಮನೆಯ ಪಕ್ಕದಲ್ಲೇ ಇದ್ದ ಮರ ಕೂಡ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಮನೆಯ ಮೇಲೆ ಮರ ಬೀಳದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಇನ್ನು ಕೃಷ್ಣಾಪುರದ ಮಿಸ್ಬಾ ಕಾಲೇಜಿನ ಆವರಣಗೋಡೆ ಕುಸಿತವಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸುರತ್ಕಲ್ ವ್ಯಾಪ್ತಿಯ ಹಲವೆಡೆ ಹತ್ತಾರು ಮರಗಳು ನೆಲಕ್ಕುರಳಿದ್ದು, ಹಲವು ವಿದ್ಯುತ್ ಕಂಬಗಳಿಗೂ ಹಾನಿ ಆಗಿದೆ.





