September 8, 2024

ಪಡುಬಿದ್ರಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು 27 ವರ್ಷಗಳ ಬಳಿಕ ಬಂಧನ

0

ಪಡುಬಿದ್ರಿ: ದಿಗ್ಭಂಧನದಲ್ಲಿರಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು, ಪ್ರಕರಣದ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಮಹತ್ವ ಕಾರ್ಯಚರಣೆ ನಡೆಸಿ 27 ವರ್ಷಗಳ ಬಳಿಕ ಪತ್ತೆ ಹಚ್ಚಿದ್ದಾರೆ.

1997 ಆಗಸ್ಟ್‌ 6 ಈ ಘಟನೆಯು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಚ್ಚಿಲದ ನಿವಾಸಿ ನಸೀಮಾ ಬಾನು ಎಂಬವರು ಠಾಣೆಗೆ ಹಾಜರಾಗಿ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ಬಾಲಕಿ ಮನೆಯಲ್ಲಿ ಹೇಳದೇ ಹೋಗಿದ್ದ ಬಗ್ಗೆ ದೂರು ನೀಡಿದರು. ಅದರಂತೆ ಪಡುಬಿದ್ರಿ ಠಾಣಾ ಅ.ಕ್ರ 69/1997 ಕಲಂ ಹುಡುಗಿ ಕಾಣೆ ಪ್ರಕರಣ ದಾಖಲಾಗಿ ತನಿಖೆನಡೆಸಲಾಗಿತ್ತು.

ಸದರಿ ಹುಡುಗಿ ದಿನಾಂಕ ಆಗಸ್ಟ್ 07 ರಂದು ಅವಳ ಮನೆಗೆ ಹೋಗುವಾಗ ದಾರಿ ತಪ್ಪಿ ಮಣಿಪಾಲದಲ್ಲಿ ನಿಂತಿದ್ದಾಗ ಆರೋಪಿ ಕುಂದಾಪುರದ ನಿವಾಸಿ ಜಮಾಲ್ ಎಂಬಾತನು ಮೋಟಾರು ಸೈಕಲಿನಲ್ಲಿ ಬಂದು ಹುಡುಗಿಯನ್ನು ಪುಸಲಾಯಿಸಿ ಮಣಿಪಾಲದ ಲಾಡ್ಜ್ ಒಂದರಲ್ಲಿ ರೂಂ ನಲ್ಲಿ ಸುಮಾರು 12 ದಿನಗಳ ಕಾಲ ದಿಗ್ಭಂಧನದಲ್ಲಿರಿಸಿ ಅತ್ಯಾಚಾರ ಎಸಗಿರುತ್ತಾನೆ ಎಂಬ ಅಮಾನವೀಯ ಘಟನೆ ತನಿಖಾ ವೇಳೆಗೆ ಬೆಳಕಿಗೆ ಬಂತು.

ಬಳಿಕ ಹುಡುಗಿಯನ್ನು ಅವಳ ಊರಿಗೆ ಕಳುಹಿಸಲೆಂದು ಆರೋಪಿಯು ಉಡುಪಿ ಬಸ್‌ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದನು. ಉಡುಪಿಯಲ್ಲಿ ಒಂದು ಲಾಡ್ಜ್ ನಲ್ಲಿ ರೂಂ ಮಾಡಿದ್ದನು. ಲಾಡ್ಜ್ ನವರು ಸಂಶಯ ಗೊಂಡು ಉಡುಪಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು.ಅದರಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಕ್ರಿಮಿನಲ್ ಚಟುವಟಿಕೆಗಳು ಎಳೆ ಎಳೆಯಾಗಿ ಬೆಳಕಿಗೆ ಬಂತು.

ಆರೋಪಿ ಜಮಾಲ್ ನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಅ.ಕ್ರ 72/1997 ಕಲಂ ಬಗ್ಗೆ 365, 366, 376 IPC ರಂತೆ ಪ್ರಕರಣ ದಾಖಲಾಗಿ ಆರೋಪಿ ಜಮಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆಹಾಜರುಪಡಿಸಿದ್ದು ಬಳಿಕ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದನು. ಬಳಿಕ ನ್ಯಾಯಾಲಯದ ವಿಚಾರಣೆ ವೇಳೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು.

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಜಮಾಲ್ ವಿರುದ್ಧ ಉಡುಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು LPC ವಾರಂಟ್‌ನ್ನು ಹೊರಡಿಸಿರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿ ಎಸ್ ಐ ಪ್ರಸನ್ನ ಎಮ್ ಎಸ್ ರವರ ನಿರ್ದೇಶನದಂತೆ ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಹೆಚ್ ಸಿ ರಾಜೇಶ್ ಹೆರ್ಗ, ಪಿ ಸಿ ಸಂದೇಶ ರವರು ವಾರಂಟ್ ಆಸಾಮಿ ಜಮಾಲ್ ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಹಚ್ಚಿದ್ದಾರೆ.

ಹೆಂಡತಿ ಮಕ್ಕಳೊಂದಿಗೆ ಆರೋಪಿ ಜಮಾಲ್ ವಾಸವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಡುಬಿದ್ರಿ ಪೊಲೀಸರು 2024 ಜುಲಾಯಿ 25 ರಂದು ಬೆಂಗಳೂರಿನ ಆತನ ಮನೆಯ ಬಳಿ ವಶಕ್ಕೆ ಪಡೆದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!