ಮಂಗಳೂರು: ಅಂಗಡಿ ಕಳ್ಳರ ಬಂಧನ: ಕೃತ್ಯ ನಡೆಸಿ ಐದು ಗಂಟೆಗಳಲ್ಲಿ ಕಾರ್ಯಾಚರಣೆ
ಮಂಗಳೂರು: ಮಂಗಳೂರಿನ ಉರ್ವದ ಕೋಟೆಕಣಿಯ ದರೋಡೆ ಪ್ರಕರಣವನ್ನು ಐದು ಘಂಟೆಯಲ್ಲಿ ಬೇಧಿಸಿರುವ ಮಂಗಳೂರು ನಗರ ಪೊಲೀಸರು ಮತ್ತೊಂದು ಸಾಧನೆ ಮಾಡಿದ್ದಾರೆ. ಉರ್ವ ಮನೆ ದರೋಡೆ ನಡೆದ ದಿನದಂದೇ ವೆಲೆನ್ಸಿಯಾದಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣದ ಆರೋಪಿಗಳನ್ನೂ ರಾತ್ರಿಯೊಳಗೆ ಬಂಧಿಸಿದ್ದಾರೆ.
ಉರ್ವದ ದರೋಡೆ ಪ್ರಕರಣದಿಂದ ಮಂಗಳೂರು ನಗರದ ಜನ ಬೆಚ್ಚಿ ಬಿದ್ದಿರುವಾಗಲೇ ನಗರದ ವೆಲೆನ್ಸಿಯಾದಲ್ಲಿ ಅಂಗಡಿ ಕಳ್ಳತನ ನಡೆದಿತ್ತು. ಅಂಗಡಿಯ ಶಟರ್ ಮುರಿದ ಕಳ್ಳರು ಅಂಗಡಿಯ ಒಳಗಿಟ್ಟಿದ್ದ 10 ಲಕ್ಷ ನಗದು ಕದ್ದೊಯ್ದಿದ್ದರು. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಬೆನ್ನತ್ತಿದ್ದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್ ಅವರು ಕೇವಲ ನಾಲ್ಕು ಗಂಟೆಯಲ್ಲಿ ಕಳ್ಳರ ಜಾಡು ಪತ್ತೆ ಹಚ್ಚಿ ರಾತ್ರಿಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್ ಅಂಗಡಿಯ ಸಿಸಿ ಟಿವಿ ಮೂಲಕ ಇಬ್ಬರು ಕಳ್ಳರ ಕೃತ್ಯ ಅನ್ನೋದನ್ನು ಸ್ಪಷ್ಟ ಪಡಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಅಟೋ ಚಾಲಕನ ಮೂಲಕ ಕಳ್ಳರು ರೈಲ್ವೇ ಸ್ಟೇಷನ್‌ಗೆ ಹೋಗುತ್ತಿರುವ ಹಾಗೂ ಹಿಂದಿ ಮಾತನಾಡುತ್ತಿರುವ ವಿಚಾರ ಸಂಗ್ರಹಿಸಿದ್ದಾರೆ. ಬಳಿಕ ರೈಲ್ವೇ ಸ್ಟೇಷನ್‌ನ ಸಿಸಿ ಟಿವಿ ಪರಿಶೀಲಿಸಿ ಅಂಗಡಿಯ ಸಿಸಿ ಟಿವಿಯಲ್ಲಿ ಕಾಣಿಸಿದ ವ್ಯಕ್ತಿಗಳ ಹೋಲಿಕೆಯ ವ್ಯಕ್ತಿಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಅದೇ ಸಾಮ್ಯತೆಯ ಇಬ್ಬರು ಎರ್ನಾಕುಲಂ ನಿಂದ ಪೂನಾ ಹೋಗುವ ರೈಲು ಹತ್ತಿರುವುದು ಪತ್ತೆ ಹಚ್ಚಿದ್ದಾರೆ.
ಈ ಎಲ್ಲಾ ಪ್ರಕ್ರಿಯೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದಿದ್ದು, ಬಳಿಕ ಪೂನಾ ರೈಲ್ವೇ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ರೈಲು ಕರ್ನಾಟಕದ ಗಡಿ ದಾಟಿ ಸತ್ತಾರ ದಾಟಿದ್ದ ಕಾರಣ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು ಎಂದು ತಕ್ಷಣ ಮಂಗಳೂರು ಪೊಲೀಸರು ಕಾರ್ಯಪ್ರವೃತ್ತರಾದ ಕಾರಣ ಈ ಆರೋಪಿಗಳ ಬಂಧನ ಸಾಧ್ಯವಾಗಿದೆ.
ಇಬ್ಬರೂ ಆರೋಪಿಗಳು ಉತ್ತರ ಪ್ರದೇಶ ಮೂಲದವರಾಗಿದ್ದು, ಮಂಗಳೂರಿನಲ್ಲಿನ ಚಿನ್ನದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್ ಮಾಹಿತಿ ಪಡೆದು ಬಂದಿದ್ದಾರೆ. ಇಲ್ಲೇ ಕೆಲಸ ಹುಡುಕುವಂತೆ ಮಾಡಿ ಅಂಗಡಿಗಳನ್ನು ಗಮನಿಸಿದ್ದು, ಕಪಿತಾನಿಯೋದ ಅಂಗಡಿಯನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದರು.