ವೀರಕಂಭ: ತನಗೆ ಸರ್ಕಾರ ನೀಡಿದ ಒಂದು ಎಕರೆ ಕೃಷಿ ಭೂಮಿಯನ್ನು ಸರ್ಕಾರಕ್ಕೆ ನೀಡಲು ಮುಂದಾದ ಬಡ ವೃದ್ಧ..!
ವಿಟ್ಲ ಮಂಗಳಪದವು ಎಂಬಲ್ಲಿ ಪರಿಶಿಷ್ಟ ಜಾತಿಯ ಬಡ ಕುಟುಂಬದ ಮಾಂಕು ಕೊರಗ ಎಂಬವರು ತನಗೆ ಸರ್ಕಾರ ನೀಡಿದ ಒಂದು ಎಕರೆ ಕೃಷಿ ಭೂಮಿಯನ್ನು ಸರ್ಕಾರಕ್ಕೆ ನೀಡಲು ಮುಂದಾಗಿರುವ ಘಟನೆಯೊಂದು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
2010 ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಇವರಿಗೆ ಸರ್ವೇ ನಂ. 283 ಮತ್ತು 282 ರಲ್ಲಿ ಒಂದು ಎಕ್ರೆ ಕೃಷಿ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ತನಗೆ ಸೇರಬೇಕಿದ್ದ ಭೂಮಿಯ ಕೆಲವು ದಾಖಲೆಗಳನ್ನು ಮಾತ್ರ ನೀಡಿ, ಕೃಷಿ ಕಾರ್ಯ ನಡೆಸದಂತೆ ಸಮಸ್ಯೆ ಎದುರಾಗಿದೆ. ಸುಮಾರು ಹದಿಮೂರು ವರ್ಷ ಕಳೆದರೂ ತನ್ನ ಜಾಗಕ್ಕೆ ಹೋಗದಂತೆ ಕೃಷಿ ಚಟುವಟಿಕೆಗಳನ್ನು ನಡೆಸದಂತೆ ಸಮಸ್ಯೆಯಲ್ಲಿ ಸಿಲುಕಿರುವ ಈ ವೃದ್ಧ ಸಾಮಾಜಿಕ ಹೋರಾಟಗಾರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದೇವಿ ಪ್ರಸಾದ್ ಶೆಟ್ಟಿ ಬೆಂಞಂತ್ತಿಮಾತ್ ಗುತ್ತು ಹಾಗೂ ಧನಂಜಯ ಪಾದೆ ಇವರು ’ಮಾಂಕು ಕೊರಗ ಎಂಬವರಿಗೆ ಸೇರಬೇಕಾದ ಎಲ್ಲಾ ದಾಖಲೆಗಳನ್ನು ಒಂದು ವಾರದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
’ನನಗೆ ಸರ್ಕಾರವು ಒಂದು ಎಕರೆ ಭೂಮಿಯನ್ನು ಕೃಷಿ ಮಾಡಲು 2010 ರಲ್ಲಿ ಸರ್ಕಾರ ನೀಡಿದೆ. ಜಾಗದ ನಕ್ಷೆ ಮತ್ತು ನಡಾವಳಿಯನ್ನು ಗಡಿಗುರುತಿಗೆ ಅಳತೆ ಮಾಡಲು ಕೇಳಿದಾಗ ನಾನು ನೀಡಿದ್ದೇನೆ. ನಾನು ನೀಡಿದ ದಾಖಲೆಗಳನ್ನು ಮತ್ತೆ ನನಗೆ ಹಿಂತಿರುಗಿಸಲಲ್ಲ. ಈ ರೀತಿಯಾಗಿ ನನ್ನ ಭೂಮಿಯನ್ನು ಕಬಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದರಿಂದ ಮನನೊಂದ ನಾನು ಮತ್ತೆ ನನ್ನ ಜಾಗವನ್ನು ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನ ಮಾಡಿದ್ದೇನೆ. ಒಂದು ವೇಳೆ ಸರಿಯಾದ ದಾಖಲೆಯನ್ನು ಒದಗಿಸಿದರೆ ಅದರಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತೇನೆ ಎಂದು ಬಹಳ ದುಃಖಿತರಾಗಿ ಮಾಂಕು ಕೊರಗ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.




