ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್
ಚೆನ್ನೈ: ಎರಡು ದಶಕಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್, ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶನಿವಾರ ವಿದಾಯ ಹೇಳಿದರು. ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಕ್ರೀಡಾಕೂಟದಲ್ಲಿ ರಾಯಲ್ಸ್ ಚಾಲೆಂಜರ್ಸ್ ತಂಡದ ಪರ ಆಡಿದ ಪಂದ್ಯವೇ ಅಂತಿಮ ಎಂದು ಹೇಳಲಾಗಿತ್ತಾದರೂ, ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲು ತಮ್ಮ 39ನೇ ಜನ್ಮದಿನವನ್ನು ಅವರು ಆಯ್ದುಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2022ರ ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಅವರು ಭಾರತ ತಂಡದ ಪರ ತಮ್ಮ ಕೊನೆಯ ಪಂದ್ಯವಾಡಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನ 180 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, ಒಟ್ಟು 3463 ರನ್ ಗಳಿಸಿದ್ದಾರೆ. ಈ ಪೈಕಿ ಒಂದು ಟೆಸ್ಟ್ ಶತಕ ಹಾಗೂ 17 ಅರ್ಧ ಶತಕಗಳನ್ನು ಗಳಿಸಿದ್ದಾರೆ.