ದ್ವೇಷ ಬಿತ್ತುವ ಕೋಮುವಾದಿಗಳ ಎದುರು ನಡುಗುವ ಸರ್ಕಾರ, ನಮಾಜನ್ನು ಅಪರಾಧ ಮಾಡಿ ಮುಸ್ಲಿಮರನ್ನು ಜೈಲಿಗಟ್ಟಲು ಹುನ್ನಾರ: ಅಬ್ದುಲ್ ಮಜೀದ್
ಬೆಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿ ಕಳೆದ ಶುಕ್ರವಾರ ಜುಮ್ಮಾ ನಮಾಜ್ ಸಂದರ್ಭದಲ್ಲಿ ಮಸೀದಿ ಭರ್ತಿಯಾಗಿದ್ದರಿಂದ ಮಸೀದಿ ಹೊರಗಿನ ಗಲ್ಲಿ ರಸ್ತೆಯಲ್ಲಿಯಲ್ಲಿ 10, 12 ಜನರು ನಮಾಜ್ ನೆರವೇರಿಸಿದ್ದಾರೆ. ಇದನ್ನು ಮಹಾಪರಾಧ ಎಂಬಂತೆ ಬಿಂಬಿಸಿ ಇಸ್ಲಾಮೋಫೋಬಿಯಾದಿಂದ ನರಳುತ್ತಿರುವ ಮಾಧ್ಯಮಗಳು ಮತ್ತು ದ್ವೇಷ ಬಿತ್ತುವ ಸಮಾಜಘಾತುಕ ಶಕ್ತಿಗಳು ಇನ್ನಿಲ್ಲದಂತೆ ಅರಚಾಡಿವೆ. ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ನಮಾಜ್ ನೆರವೇರಿಸಿದವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ದ್ವೇಷ ಬಿತ್ತುವ ಕೋಮುವಾದಿಗಳ ಎದುರು ನಡುಗುವ ಸರ್ಕಾರ ನಮಾಜನ್ನು ಅಪರಾಧ ಮಾಡಿ ಮುಸ್ಲಿಮರನ್ನು ಜೈಲಿಗಟ್ಟಲು ಉತ್ಸುಕವಾಗಿದೆ. ಇದು ಅತ್ಯಂತ ಖಂಡನಾರ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ಕಿಡಿ ಕಾರಿದ್ದಾರೆ.
ಮುಖ್ಯರಸ್ತೆಯಿಂದ ಸುಮಾರು 150 ಮೀಟರ್ ಒಳಗಿರುವ ಪ್ರದೇಶ ಅದು. ಅಲ್ಲಿಂದ 100 ಮೀಟರ್ ದೂರದಲ್ಲಿ ರಸ್ತೆಯ ಡೆಡ್ ಎಂಡ್ ಬರುತ್ತದೆ. ಅಂತಹ ರಸ್ತೆಯ ಒಂದು ಭಾಗದಲ್ಲಿ ಐದು ನಿಮಿಷ ನಮಾಜ್ ನೆರವೇರಿಸಿದ್ದಾರೆ ಅಷ್ಟೇ. ಅದರಿಂದ ಸಂಚಾರಕ್ಕೆ ಯಾವ ಅಡಚಣೆಯೂ ಆಗಿಲ್ಲ. ಇಷ್ಟಕ್ಕೂ ಇಷ್ಟು ವರ್ಷ ಇಲ್ಲದ ಆಕ್ಷೇಪಣೆ ಈಗ ಏಕೆ? ಕೆಲವು ತಿಂಗಳುಗಳ ಹಿಂದೆ ಇದೇ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯಾ ಧಾಮ್ ರೈಲು ಹತ್ತುವ ಮೊದಲು ಯಾತ್ರಿಗಳು ಇಡೀ ರೈಲ್ವೆ ನಿಲ್ದಾಣವನ್ನು ಬಳಸಿ ರಾಮ ಭಜನೆ ಮಾಡಿದ್ದರು. ಇದರಲ್ಲಿ ಪೊಲೀಸರೂ ಪಾಲ್ಗೊಂಡಿದ್ದರು. ಆಗ ಏಕೆ ಇದೇ ಸರ್ಕಾರ ಪ್ರಕರಣ ದಾಖಲಿಸಲಿಲ್ಲ? ಮುಸ್ಲಿಮರಿಗೆ ಒಂದು ಕಾನೂನು, ಹಿಂದೂಗಳಿಗೆ ಒಂದು ಕಾನೂನು ಇದೆಯೆ? ಎಂದು ತಮ್ಮ ಪ್ರಕಟಣೆಯ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚಲು ಹವಣಿಸುತ್ತಿರುವ ಕಿಡಿಗೇಡಿಗಳ ಗುಂಪುಗಳು ಉದ್ದೇಶಪೂರ್ವಕವಾಗಿ ಮುಸ್ಲಿಮರ ವಿರುದ್ಧ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಲೇ ಇರುತ್ತಾರೆ. ಮಸೀದಿ ಕೆಳಗೆ ಮಂದಿರ ಹುಡುಕುವ ನಡುವೆ ಈಗ ಇಂತಹ ನೀಚತನಕ್ಕೆ ಮುಂದಾಗಿದ್ದಾರೆ. ಅದು ಅವರ ಚಾಳಿ. ಆದರೆ ಸರ್ಕಾರ, ಅದರಲ್ಲೂ ಮುಸ್ಲಿಮರ ಹಿತ ಕಾಯುವ ವಾಗ್ದಾನದೊಂದಿಗೆ ಮುಸ್ಲಿಮರ ಶೇ. 90 ಕ್ಕೂ ಹೆಚ್ಚು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಂತಹ ಕಿಡಿಗೇಡಿಗಳಿಗೆ ಹೆದರಿ ಮುಸ್ಲಿಮರ ಪ್ರಾರ್ಥನೆಯನ್ನೂ ಅಪರಾಧ ಮಾಡಿ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯನವರ ಸರ್ಕಾರ ಕೋಮುವಾದಿ ಸಮಾಜಘಾತುಕ ಶಕ್ತಿಗಳಿಗೆ ಹೆದರುವ ಮತ್ತು ಮಣಿಯುವುದನ್ನು ಬಿಟ್ಟು ನ್ಯಾಯದ ಪರ ನಿಲ್ಲಬೇಕು. ತಕ್ಷಣವೇ ನಮಾಜಿಗಳ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅಗ್ರಿಹಿಸಿದ ಮಜೀದ್ ಅವರು, ಇಲ್ಲವಾದಲ್ಲಿ ಸೂಕ್ತ ಸಮಯದಲ್ಲಿ ಈ ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಬಿಸಿ ಮುಟ್ಟಿಸಲಿದೆ ಎಂದು ತಮ್ಮ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.





