ಪಡುಬಿದ್ರೆ | ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಮೃತ್ಯು

ಉಡುಪಿ : ವ್ಯಾಗನರ್ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್ ಬಳಿ ಬೆಳಗ್ಗೆ ನಡೆದಿದೆ.
ಮೃತಪಟ್ಟವರು ಪುರುಷೋತ್ತಮ ಆರ್. ಆಭ್ಯಂಕರ್ ಅವರ ಪತ್ನಿ ಸುಮಂಗಲಾ ಎಂ. (55) ಎಂದು ತಿಳಿದು ಬಂದಿದೆ.
ರಾಜ್ಯ ಹೆದ್ದಾರಿ-1ರಲ್ಲಿ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಈ ದಂಪತಿ ಕಾರ್ಕಳ ಮಾಳದಲ್ಲಿನ ಉಪನಯನ ಕಾರ್ಯಕ್ರಮಕ್ಕೆ ಮಂಗಳೂರು ಕಾವೂರಿನಿಂದ ಹೊರಟು ಹೋಗುತ್ತಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಸಹಜವಾಗಿ ವೇಗವಾಗಿಯೇ ಬರುತ್ತಿದ್ದ ಕಾರು ಒಮ್ಮೆಲೇ ರಸ್ತೆಯ ತೀರ ಎಡಕ್ಕೆ ಚಲಿಸಿ ಡಾಮರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿದು ರಸ್ತೆಯ ಬದಿಯಲ್ಲಿದ್ದ ಸಿಮೆಂಟ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಈ ಅಪಘಾತದಿಂದ ಸುಮಂಗಲಾ ಎಂ. ಅವರ ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಚಾಲಕ ಪುರುಷೋತ್ತಮ ಅವರಿಗೂ ಗಾಯಗಳಾಗಿದ್ದು, ಸಾರ್ವಜನಿಕರ ಸಹಾಯದಿಂದ ಅವರನ್ನು ಕಾರಿನಿಂದ ಹೊರತೆಗೆದು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಸುಮಂಗಲಾ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.