ಉಳ್ಳಾಲ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಸಲು ಹಾಕಲಾಗಿರುವ ಫ್ಲೆಕ್ಸ್ ವೈರಲ್
ಉಳ್ಳಾಲ: ದಕ್ಷಿಣಕನ್ನಡದ ಉಳ್ಳಾಲ ಬೀಚ್ ದಡದಲ್ಲಿ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಸಲು ಹಾಕಲಾಗಿರುವ ಫ್ಲೆಕ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀಚ್‌ನಲ್ಲಿ ನೀರಿಗೆ ಇಳಿಯುವ ಪ್ರವಾಸಿಗರು ಸಮುದ್ರ ಪಾಲಾಗುತ್ತಿರುವುದನ್ನು ತಡೆಯಲು ‘ಶೈತಾನ್ʼ ಭಯವನ್ನು ತೇಲಿ ಬಿಡಲಾಗಿದೆ.
ಉಳ್ಳಾಲ ಮದನಿ ದರ್ಗಾಗೆ ಆಗಮಿಸುವ ಭಕ್ತರು ಸಮೀಪದ ಕಡಲ ಕಿನಾರೆಗೆ ಹೋಗುವುದು ವಾಡಿಕೆಯಾಗಿದ್ದು, ಕುಟುಂಬ ಸಮೇತರಾಗಿ ಬರುವ ಭಕ್ತರು ಕತ್ತಲಾದ ಬಳಿಕವೂ ಬೀಚ್ ನಿಂದ ತೆರಳದೆ ಇರುವ ಸಂದರ್ಭಗಳೂ ಇವೆ. ಇದನ್ನು ತಡೆಗಟ್ಟಲು ʼಉಳ್ಳಾಲ ನಾಗರಿಕರ ಪರವಾಗಿʼ ಫ್ಲೆಕ್ಸ್ ಹಾಕಲಾಗಿದ್ದು, ಪ್ರದೇಶದಲ್ಲಿ ಶೈತಾನನ ಉಪಟಳವಿದೆ ಎಂದು ಎಚ್ಚರಿಸಲಾಗಿದೆ.
ಹಗಲು ಕೊನೆಗೊಳ್ಳುವ ಸೂರ್ಯಾಸ್ತಮಾನ ಸಮಯವನ್ನು ಮುಸ್ಲಿಮರಲ್ಲಿ ಮಗ್ರೀಬ್ ಎಂದು ಕರೆಯಲಾಗುತ್ತದೆ. ಸೂರ್ಯಸ್ತಮಾನ ಮುನ್ನವೇ ಸಮುದ್ರ ಕಿನಾರೆಯಿಂದ ತೆರಳಲು ಮನವಿ ಮಾಡಲಾಗಿದ್ದು, ಶೈತಾನನ ಉಪಟಳದಿಂದಾಗಿ ಹಲವು ಮಕ್ಕಳು ರೋಗಗ್ರಸ್ತರಾಗಿ ಜೀವ ಕಳೆದುಕೊಂಡಿದ್ದಾರೆ ಎಂದೂ ಎಚ್ಚರಿಸಲಾಗಿದೆ.




