April 11, 2025

ವಿಟ್ಲ: ಕುಡಿಯುವ ನೀರಿಗಾಗಿ ಪರದಾಟ: ಕೊಡ, ಬಕೆಟ್ ಹಿಡಿದು ಗ್ರಾಪಂಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

0

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೊಡ, ಬಕೆಟ್ ಹಿಡಿದು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿದರು.

ಈ ಸಂದರ್ಭ ಮಾತನಾಡಿದ ರಮೇಶ್ ನಾಯಕ್ ಅವರು ಇಲ್ಲಿಯ ನೀರಿನ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಅಧಿಕಾರಿಯವರ ಗಮನಕ್ಕೆ ತಂದಿದ್ದು, ಬಳಿಕ ಅವರು ನೀರಿನ ಒರತೆ ಇಲ್ಲದ ಜಾಗದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಆದರೆ ಅಲ್ಲಿ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಒರತೆ ಇಲ್ಲ. ಇಲ್ಲಿ ಕೊಳವೆ ಬಾವಿ ಕೊರೆಯಬೇಡಿ ಎಂದರೂ ಕೊರೆಸಿದ್ದಾರೆ. ನಮ್ಮ ಮಾತಿಗೆ ಬೆಲೆ ಇಲ್ಲಂತಾಗಿದೆ. ಇದೀಗ ನೀರಿಗಾಗಿ ನಾವು ಪರದಾಟ ನಡೆಸುತ್ತಿದ್ದೇವೆ. ತಕ್ಷಣವೇ ನಮಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥೆ ನಳಿನಿ ಅವರು ಮಾತನಾಡಿ ಕೆಮನಾಜೆ, ಶಾಂತಿಯಡ್ಕ, ಹಲಸಿನಕಟ್ಟೆ, ಬೇರಿಕೆ ಮತ್ತು ಪಿಲಿಂಜ ಭಾಗದಲ್ಲಿ ನೀರಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸುತ್ತಮುತ್ತಲಿನಲ್ಲಿ ಬಾವಿ ಕೂಡ ಇಲ್ಲ. ನೀರಿಗಾಗಿ ೨ ಕಿ.ಮೀ ದೂರ ಹೋಗಬೇಕು. ಕೊಳವೆ ಬಾವಿಗೆ ಹಾಕಿದ ಪಂಪ್ ಹಾಳಾಗಿದೆ ಎಂದು ಹೇಳಿದರೂ ಯಾರೂ ಇತ್ತ ಕಡೆ ಸುಳಿಯುವುದಿಲ್ಲ ಎಂದು ಆರೋಪಿಸಿದರು.

 

 

ಎಲ್ಯಣ್ಣ ಪೂಜಾರಿ ಮಾತನಾಡಿ ಈ ಭಾಗದಲ್ಲಿ ನೀರಿಗಾಗಿ ಬಡಪಾಯಿ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿನವರು ವಾಹನದಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಅದರ ನಮಗೆ ಸಾಕಾಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ಕೆಲವು ಸದಸ್ಯರು ಜೀವ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಕ್ಷಣವೇ ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ್ ಮತ್ತು ಅಧ್ಯಕ್ಷ ಪುನೀತ್ ಮಾಡತ್ತಾರು ಅವರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಹಾಳಾಗಿರುವ ಪಂಪ್ ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಈ ಸಂದರ್ಭ ರಾಮಣ್ಣ ಪಿಲಿಂಜ, ಲೋಹಿತ್ ಪೂಜಾರಿ, ನವೀನ್ ಗೌಡ, ಪದ್ಮಾವತಿ , ಶೀನ ಮೂಲ್ಯ, ಸೀತಾ, ಗೀತಾ ರಕ್ಮಯ್ಯ ಗೌಡ, ತಾರಾನಾಥ ಹಾಗೂ ಕೃಷ್ಣಪ್ಪ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಅಭಿವೃದ್ಧಿ ಅಧಿಕಾರಿ ಸುಜಯ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇಲ್ಲಿರುವ ನೀರಿನ ಸಮಸ್ಯೆಯನ್ನು ಮನಗಂಡು ೯ ಪಿಕಪ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ೧೮ ಸಾವಿರ ಲೀಟರ್ ನೀರು ಕೊಡಲಾಗುತ್ತಿದೆ. ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ ಜನರಿಗೆ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!