ದೇಶದಲ್ಲೇ ನಂ1 ಸಂಸದ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಯಾಕೆ ಸಿಕ್ಕಿಲ್ಲ?: ಕಾಂಗ್ರೆಸ್ ಮುಖಂಡ ಅಭಯ ಚಂದ್ರ ಜೈನ್

ಮಂಗಳೂರು: ನಳಿನ್ ಕುಮಾರ್ ಕಟೀಲ್ ಅಭಿವೃದ್ದಿ ವಿಚಾರದಲ್ಲಿ ದೇಶದಲ್ಲೆ ನಂ1 ಸಂಸದ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದರು. ಹಾಗಿದ್ದರೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಯಾಕೆ ಸಿಕ್ಕಿಲ್ಲ? ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಅಭಯ ಚಂದ್ರ ಜೈನ್ ಪ್ರಶ್ನಿಸಿದ್ದಾರೆ.
ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್ ಸಂಸದರಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಕಾಲದಲ್ಲಿ ಮಾತ್ರ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸಗಳು ನಡೆದಿವೆ. ಕಾಂಗ್ರೆಸ್ ಕಾಲದಲ್ಲಿ ಆರಂಭವಾಗಿದ್ದ ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕೂಡ ಬಿಜೆಪಿಯವರಿಂದ ಸಾಧ್ಯವಾಗಿಲ್ಲ ಎಂದರು.
ಬಿಜೆಪಿ ಕೇವಲ ಪ್ರಚಾರ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಗೆಲ್ಲುತ್ತಿದೆ. ಜನಸಾಮಾನ್ಯರಿಗೆ ಯಾವುದೆ ಅನುಕೂಲ ಮಾಡಿಕೊಟ್ಟಿಲ್ಲ. ಇದು ಈಗ ಜನರಿಗೆ ಅರ್ಥವಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬೆಲೆ ಹೆಚ್ಚಳ, ಜಿಎಸ್ ಟಿ ಮೊದಲಾದವುಗಳಿಂದ ಜನ ಸಂಕಷ್ಟದಲ್ಲಿದ್ದರೆ ಪ್ರಧಾನಿ ಮೋದಿ, ಬಿಜೆಪಿಯವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಯುವಕರು ಮೋದಿಯ ಭಾಷಣಕ್ಕೆ ಮರುಳಾಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ತಿಳಿಸಬೇಕಾಗಿದೆ ಎಂದರು.