ಬೆಳ್ತಂಗಡಿ: ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ: ಕಾರು ಚಾಲಕ ಮೃತ್ಯು

ಬೆಳ್ತಂಗಡಿ: ಗುರುವಾಯನಕೆರೆಯ ಶಕ್ತಿ ನಗರದ ಬಳಿ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಾ.29 ರಂದು ನಡೆದಿದ್ದು ಕಾರು ಚಾಲಕ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಕಾರು ಚಲಾಯಿಸುತ್ತಿದ್ದ ಲಾಯಿಲ ಗ್ರಾಮದ ಮೋರ್ನಿಂಗ್ ಸ್ಟಾರ್ ನಿವಾಸಿ ವಿ.ವಿ ಮ್ಯಾಥ್ಯೂ ಅವರ ಪುತ್ರ ಪ್ರೈಸ್ ಮ್ಯಾಥ್ಯು (32)ಎಂಬವರೆಂದು ಗುರುತಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕಾರು ಬೆಳ್ತಂಗಡಿಯಿಂದ ಮೂಡಬಿದಿರೆ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕ್ರೈಸ್ತರ ಗುಡ್ ಫ್ರೈಡೆ ದಿನವಾದ ಶುಕ್ರವಾರದಂದೇ ಈ ದುರ್ಘಟನೆ ನಡೆದಿರುವುದರಿಂದ ಮನೆಯವರು ದುಃಖದ ಮಡುವಿನಲ್ಲಿರುವಂತಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ಕ್ರಮಗಳನ್ನು ಜರುಗಿಸಲಾಗಿದೆ.