ಯಡಿಯೂರಪ್ಪ ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ್ ಬೊಮ್ಮಾಯಿಗೆ ಟಿಕೆಟ್: ಮತ್ತೆ ಅಸಮಾಧಾನ ಹೊರ ಹಾಕಿದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಪುತ್ರನಿಗೆ ಟಿಕೆಟ್ ತಪ್ಪಿದ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸಿಎಂ ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಲ್ಲೇಶ್ವರ ನಗರದ ಜಯಲಕ್ಷ್ಮೀ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಯಡಿಯೂರಪ್ಪ ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡಿಸಲು ಆಗಲಿಲ್ಲವೇ? ತಾಯಿ ಸ್ಥಾನದಲ್ಲಿರುವ ಪಕ್ಷದ ಕತ್ತು ಹಿಸುಕುತ್ತಿದ್ದಾರೆ. ತಾಯಿ ಸ್ಥಾನದಲ್ಲಿರುವ ಪಕ್ಷವನ್ನು ಉಳಿಸುವಂತೆ ಕಾರ್ಯಕರ್ತರು ನನಗೆ ಒತ್ತಾಯಿಸುತ್ತಿದ್ದಾರೆ. ಕೇವಲ ಕಾಂತೇಶ್ಗೆ ಮಾತ್ರವಲ್ಲ ಪ್ರತಾಪ್ ಸಿಂಹ, ಸದಾನಂದ ಗೌಡ, ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಅನ್ಯಾಯವಾಗಿದೆ ಎಂದು ಗುಡುಗಿದ್ದಾರೆ. ಒಂದು ಕುಟುಂಬದ ಕೈಯೊಳಗೆ ಪಕ್ಷ ಸಿಕ್ಕಿ ಹಾಕಿಕೊಂಡಿದೆ. ಹಾಗಾಗಿ ಪಕ್ಷವನ್ನು ಉಳಿಸಬೇಕಿದೆ ಎಂದಿದ್ದಾರೆ.
ಮಾನ್ಯ ಯಡಿಯೂರಪ್ಪ ಅವರ ಮನೆಗೆ ಹೋದಾಗ ಅವರು ನನ್ನ ಮಗ ಕಾಂತೇಶ್ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಅದನ್ನು ನಂಬಿ ಕಾಂತೇಶ್ ಆ ಭಾಗದಲ್ಲಿ ಓಡಾಡಿದ್ದ, ಜನರ ವಿಶ್ವಾಸಗಳಿಸಿದ್ದ. ಈಗ ಯಡಿಯೂರಪ್ಪ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಬೇಸರ ಹೊರ ಹಾಕಿದರು.
ಮಾರ್ಚ್ 15 ರಂದು ನಾನು ಸಭೆ ಕರೆದಿದ್ದೇನೆ. ಆ ಸಭೆಯ ಅಭಿಪ್ರಾಯ ಆಧರಿಸಿ ಮುಂದುವರಿಯುತ್ತೇನೆ ಎಂದು ಹೇಳಿದರು.





