ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಇಂದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅವರು ಕಾಂಗ್ರೆಸ್ ಗೆ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಕರಾವಳಿಯ ಅಭಿವೃದ್ಧಿಯ ಗುರಿ ಸಾಧನೆಗಾಗಿ ರಾಜಕೀಯದಲ್ಲಿ ಮತ್ತೆ ಸಕ್ರಿಯನಾಗಲು ನಿರ್ಧರಿಸಿದ್ದೇನೆ. ಅದರಂತೆ ಮಾ.12ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸಲು ನಿರ್ಣಯಿಸಿದ್ದೇನೆ ಎಂದು ಕೆ.ಜಯಪ್ರಕಾಶ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಕಾಶ್ ಹೆಗ್ಡೆ ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶಿಸುತ್ತಾರೆ. 1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಬಳಿಕ 2004ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿ ಮೀನುಗಾರಿಕಾ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದರು.2008ರ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆ ಸೋಲಿನ ಬಳಿಕ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಬಂದರೂ ಸಹ ಬಿಜೆಪಿಯ ಕೆಲ ಸಿದ್ಧಾಂತಗಳನ್ನು ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹೆಗ್ಡೆಯವರನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸರಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯ ಹಿನ್ನಲೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಹೆಗ್ಡೆಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಕೆ ಮಾಡಿದ್ದರು. ಫೆಬ್ರವರಿ ಅಂತ್ಯದಲ್ಲಿ ಹೆಗ್ಡೆ ತಮ್ಮ ತಂಡದ ಜೊತೆ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದ್ದರು. ಜಯಪ್ರಕಾಶ್ ಹೆಗ್ಡೆ ಇದೀಗ ಮತ್ತೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ.





