ಮಂಗಳೂರು: ಉಳ್ಳಾಲದ ಭಂಡಾರ ಮನೆ ಧ್ವಂಸ: ಮೂವರು ಆರೋಪಿಗಳ ಬಂಧನ
ಮಂಗಳೂರು: ಉಳ್ಳಾಲದ ಕೋಟೆಕಾರು ಶ್ರೀ ಕ್ಷೇತ್ರ ಕೊಂಡಣ್ಣ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಭಂಡಾರ ಮನೆ ಎಂದರೆ ದೇವಾರಾಧನೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ಮನೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಕೊಂಡಣ್ಣ ದೇವಸ್ಥಾನವು ದತ್ತಿ ಇಲಾಖೆಯಿಂದ ಆಡಳಿತ ನಡೆಸುತ್ತಿದೆ. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದೇವಸ್ಥಾನದ ಪಕ್ಕದ ಸರ್ಕಾರಿ ಜಾಗದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಭಂಡಾರ ಮನೆಯನ್ನು ಜೆಸಿಬಿ ಬಳಸಿ ಕೆಡವಲಾಯಿತು. ದೇವಸ್ಥಾನದ ಮುಖ್ಯ ಅಧಿಕಾರಿ ಆನಂದ್ ನೀಡಿದ ದೂರಿನ ಆಧಾರದ ಮೇಲೆ ಉಲ್ಲಾಳ ಪೊಲೀಸರು ಸೆಕ್ಷನ್ 143,147,148,295,427 IPC ಮತ್ತು 2A KPDLP ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ನಂತರ ಘಟನೆಗೆ ಸಂಬಂಧಿಸಿದಂತೆ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ದೇವಸ್ಥಾನದ ಎಲ್ಲಾ 16 ಗುರಿಕಾರರು ಅಕ್ರಮ ಮತ್ತು ಯಾವುದೇ ಅನುಮತಿಯಿಲ್ಲದೆ ನಿರ್ಮಿಸಲಾಗುತ್ತಿರುವ ಭಂಡಾರ ಮನೆ ನಿರ್ಮಾಣಕ್ಕೆ ಒಪ್ಪಿಗೆ ನೀಡದ ಕಾರಣ ಅದನ್ನು ಧ್ವಂಸ ಮಾಡಿದ್ದಾರೆ ಎಂದು ಅಗರ್ವಾಲ್ ಹೇಳಿದರು.
ಈ ಕುರಿತು ಮಂಗಳೂರು ಸಹಾಯಕ ಕಮಿಷನರ್ ಮತ್ತು ತಹಶೀಲ್ದಾರ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಟ್ಟಡವನ್ನು ತಾವೇ ಕೆಡವಲು ನಿರ್ಧರಿಸಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದರು.





