ಕೊರಟಗೆರೆ: ಶಾಲಾ ವಾಹನ ಪಲ್ಟಿ:
8 ವಿದ್ಯಾರ್ಥಿಗಳಿಗೆ ಗಾಯ, 15 ಮಕ್ಕಳು ಅಪಾಯದಿಂದ ಪಾರು

ತುಮಕೂರು: ಶಾಲಾ ವಾಹನ ಪಲ್ಟಿಯಾದ ಹಿನ್ನೆಲೆಯಲ್ಲಿ ಸುಮಾರು 8 ವಿದ್ಯಾರ್ಥಿಗಳು ಗಾಯಗೊಂಡಿದ್ದು 15 ಶಾಲಾ ಮಕ್ಕಳು ಅಪಾಯದಿಂದ ಪಾರಾಗಿರುವ ಘಟನೆ ಕೊರಟಗೆರೆಯಲ್ಲಿ ನಡೆದಿದೆ.
ಇದು ಎಸ್ವಿಜಿ ಶಾಲೆಗೆ ಸೇರಿದ ವ್ಯಾನ್ ಎನ್ನಲಾಗಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಮಕ್ಕಳಿಗೆ ತಲೆಗೆ ಗಾಯವಾಗಿದ್ದು ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಚಾಲಕ ಮದ್ಯ ಸೇವನೆ ಮಾಡಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಬೆಳಗ್ಗೆ 11 ಗಂಟೆ ಸಮಯಕ್ಕೆ ಘಟನೆ ನಡೆದಿದೆ.
ವ್ಯಾನ್ ಬೆಳಿಗ್ಗೆ 8 ಗಂಟೆಗೆ ನಮ್ಮ ಗ್ರಾಮಕ್ಕೆ ಬರಬೇಕಿತ್ತು ಆದರೆ 10 ಗಂಟೆಗೆ ಬಂದಿತು ಮತ್ತು ಚಾಲಕ ಗೋವಿಂದ ಕುಡಿದಿದ್ದನು ಎಂದು ಮಕ್ಕಳು ಆರೋಪಿಸಿದ್ದಾರೆ. ವ್ಯಾನ್ ಜಿಗ್ ಜಾಗ್ ರೀತಿಯಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ಉರುಳಿ ಬಿತ್ತು.
ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಮಕ್ಕಳನ್ನು ರಕ್ಷಿಸಿದ್ದಾರೆ. ಗಾಬರಿಗೊಂಡ ಪೋಷಕರು ಆಸ್ಪತ್ರೆಗೆ ಧಾವಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾನೆ.ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.