ನಾಗಾಲ್ಯಾಂಡ್: ಗುಂಡಿನ ದಾಳಿಯಲ್ಲಿ 13 ಮಂದಿ ಮೃತ್ಯು
ನಾಗಾಲ್ಯಾಂಡ್: ಸೋಮ ಜಿಲ್ಲೆಯ ತಿರು ಹಳ್ಳಿ ಪ್ರದೇಶದಲ್ಲಿ ಶನಿವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ 13 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹದಿಮೂರು ಸಾವುಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಇಮ್ನಾಲೆನ್ಸಾ ಖಚಿತಪಡಿಸಿದ್ದಾರೆ.
ಇಲ್ಲಿನ ಓಟಿಂಗ್ ಎಂಬ ಗ್ರಾಮದ ಜನರು ಒಂದು ಪಿಕ್ ಅಪ್ ಮಿನಿ ಟ್ರಕ್ ಮೂಲಕ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಇವರಿನ್ನೂ ಬರಲಿಲ್ಲ ಎಂದು ಹುಡುಕುತ್ತ ಹೋದ ಸ್ಥಳೀಯರಿಗೆ ಟ್ರಕ್ ಮತ್ತು 13 ಮಂದಿ ನಾಗರಿಕರ ಮೃತದೇಹ ಸಿಕ್ಕಿದೆ. ಅದನ್ನು ನೋಡಿ ಕೋಪಗೊಂಡ ಜನರು ಭದ್ರತಾ ಪಡೆಯ ಎರಡು ವಾಹನಕ್ಕೆ ಬೆಂಕಿ ಹಾಕಿದ್ದಾರೆ.
ಘಟನೆಗೆ ನಿಜವಾದ ಕಾರಣ ಗೊತ್ತಾಗಿಲ್ಲ. ಗುಂಡಿನ ದಾಳಿ ನಡೆಸಿದ್ದು ಯಾರೆಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗೇ, ನಾಗಾಲ್ಯಾಂಡ್ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ. ಈ ಗುಂಡಿನ ದಾಳಿ ತೀವ್ರ ಖಂಡನೀಯ. ಅನ್ಯಾಯವಾಗಿ ಬಲಿಯಾದವರ ಸಾವಿಗೆ ನ್ಯಾಯ ಒದಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯರು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, ನಾಗಾಲ್ಯಾಂಡ್ ನ ಓಟಿಂಗ್ ನಲ್ಲಿ ನಡೆದ ಘಟನೆಯಿಂದ ನೋವಾಗಿದೆ. ಮೃತರ ಕುಟುಂಗಳಿಗೆ ನನ್ನ ಸಾಂತ್ವನಗಳು. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಎಸ್ಐಟಿ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.





