February 2, 2026

ಉಳ್ಳಾಲ: ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಏಲಂ ಪ್ರಕ್ರಿಯೆಯಲ್ಲಿ ಅಕ್ರಮ: ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿದ ಬಿಜೆಪಿ, ಎಸ್‌ಡಿಪಿಐ, ಜೆಡಿಎಸ್ ಸದಸ್ಯರು

0
image_editor_output_image351540506-1707116652128.jpg

ಉಳ್ಳಾಲ: ನಗರೋತ್ಥಾನ -3ರಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕರಣಗೊಂಡ ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಗರಸಭೆಯ ಬಿಜೆಪಿ, ಎಸ್‌ಡಿಪಿಐ, ಜೆಡಿಎಸ್ ಸದಸ್ಯರು ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿದರು.

ವೀಕ್ಷಕರಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್ ಸೂಚನೆಯಂತೆ ಪೊಲೀಸರು ಹರಾಜು ವಿರೋಧಿಸಿದ ನಗರಸಭೆ ಸದಸ್ಯರನ್ನು ಸಭೆಯಿಂದ ಹೊರಗೆ ಕಳೂಹಿಸಿದರು.

ಶನಿವಾರ ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯೆ ಗೀತಾ ಭಾಯಿ ಅವರು, ತಮ್ಮ ವಾರ್ಡ್‌ ವ್ಯಾಪ್ತಿಯ ಮಾರುಕಟ್ಟೆಯ ದಿಢೀರ್ ಹರಾಜು ಪ್ರಕ್ರಿಯೆಯ ಬಗ್ಗೆ ನಿನ್ನೆ ಸಂಜೆ ವಿಚಾರ ತಿಳಿದಿದೆ. ಈ ಹರಾಜಿನಲ್ಲಿ ಪಾರದರ್ಶಕತೆ ಇಲ್ಲ. ಹಣ ನೀಡಿದವರಿಗೆ 16 ಅಂಗಡಿಗಳನ್ನು ಮೀಸಲಿರಿಸಿದ್ದು, ಹರಾಜು ತಡೆಯುವಂತೆ ಸಹಾಯಕ ಆಯುಕ್ತರಲ್ಲಿ ಆಗ್ರಹಿಸಿದರು. ಹರಾಜು ಪ್ರಕ್ರಿಯೆ ಮುಂದುವರಿದಾಗ ಸದಸ್ಯರು ಧಿಕ್ಕಾರ ಕೂಗಿದರು. ಸಭೆಯಿಂದ ಹೊರಗೆ ಹಾಕಿದ ನಂತರ, ಸದಸ್ಯರು ನಗರಸಭೆ ಕಚೇರಿ ಗೇಟಿನ ಎದುರು ಪ್ರತಿಭಟನೆ ನಡೆಸಿ, ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಸದಸ್ಯ ರಮೀಝ್ ಮಾತನಾಡಿ, ‘2023ರ ಜನವರಿ 10ರಂದು ಮಾರುಕಟ್ಟೆಯನ್ನು ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಹರಾಜಲ್ಲಿ ಭಾಗವಹಿಸಲು ಅನೇಕ ಮಂದಿ ತಲಾ ₹500 ಕಟ್ಟಿದ್ದರು. ಅಂದಿನ ಹರಾಜು ತಡೆದದ್ದು ಏಕೆ? ಜನರು ಕಟ್ಟಿದ ಹಣ ಎಲ್ಲಿ ಹೋಯಿತು, ಈಗ ದಿಢೀರನೆ ಹರಾಜು ನಡೆಸಿದ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

ನಗರಸಭೆ ಸದಸ್ಯೆ ಖಮರುನ್ನೀಸ ಮಾತನಾಡಿ, ‘ಇದು ಅಧಿಕಾರಿಗಳ ಲಾಭಕ್ಕಾಗಿ ಮಾಡಿದ ಹರಾಜು. ಇಲ್ಲಿನ ಪೌರಾಯುಕ್ತೆ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವುದೇ ಸಭೆ ಮಾಡದೆ ನಿನ್ನೆ ಸಂಜೆ ಏಕಾಏಕಿ ಹರಾಜಿನ ಸಂದೇಶವನ್ನ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಾರೆ’ ಎಂದು ದೂರಿದರು.

ಸದಸ್ಯರ ವಿರೋಧ, ಪ್ರತಿಭಟನೆಯ ನಡುವೆಯೂ ಹರಾಜು ಪ್ರಕ್ರಿಯೆ ನಡೆಯಿತು. ನಗರ ಸಭೆಯ ಮಾಜಿ ಉಪಾಧ್ಯಕ್ಷರೊಬ್ಬರು ಲಕ್ಷಾಂತರ ರೂಪಾಯಿ ಹಣ ಪಡೆದು ಮಾರುಕಟ್ಟೆಯ ಮಳಿಗೆಗಳನ್ನ ತಮಗೆ ಬೇಕಿರುವವರಿಗೆ ಮಾರಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!