ಮಂಗಳೂರಿನ ಲಾಡ್ಜ್ ನಲ್ಲಿ ಹನಿಟ್ರ್ಯಾಪ್: ಇಬ್ಬರು ಮಹಿಳೆಯರ ಸಹಿತ 7 ಮಂದಿಯ ಬಂಧನ
ಮಂಗಳೂರು: ಕೇರಳದ ಸಮಾಜ ಸೇವಕರೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಘಟನೆ ಮಂಗಳೂರು ಲಾಡ್ಜ್ ಒಂದರಲ್ಲಿ ನಡೆದಿದೆ.
ಈ ಹನಿಟ್ರ್ಯಾಪ್ ಪ್ರಕರಣವನ್ನು ಬೇಧಿಸಿರುವ ಕೇರಳ ಪೊಲೀಸರು ಇಬ್ಬರು ಮಹಿಳೆಯರ ಸಹಿತ 7 ಮಂದಿಯನ್ನ ಬಂಧಿಸಿದ್ದಾರೆ.
ವಿದೇಶದಿಂದ ವಾಪಾಸಾಗಿದ್ದ ಕಾಸರಗೋಡು ಮೂಲದ 59 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್‌ಗೆ ಒಳಪಡಿಸಲಾಗಿತ್ತು.
ಆರೋಪಿಗಳು ಮೊದಲಿಗೆ 5 ಲಕ್ಷ ವಸೂಲಿ ಮಾಡಿದ್ದು, ಬಳಿಕ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಸಂತ್ರಸ್ತ ವ್ಯಕ್ತಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಲ್ಲಿಕೋಟೆಯ ಪೆರುಮಣ್ಣ ನಿವಾಸಿ ಪಿ.ಫೈಝಲ್, ಆತನ ಪತ್ನಿ ರುಬೀನಾ, ಕಾಸರಗೋಡು ಶಿರಿಬಾಗಿಲು ನಿವಾಸಿ ಸಿದ್ದಿಕ್ , ಮಾಂಬಾಡ್ನ ದಿಲಾದ್, ಮುಟ್ಟತ್ತೋಡಿ ನಫೀಸತ್ ಮಿಸ್ತ್ರಿಯಾ , ಅಬ್ದುಲ್ ಕುಂಜಿ ಹಾಗೂ ರಫೀಕ್ ಎಂಬವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಆರೋಪಿಗಳ ಪೈಕಿ ದಿಲಾದ್ ಎಂಬಾತ ಈ ಪ್ರಕರಣದ ಕಿಂಗ್ ಪಿನ್ ಆಗಿದ್ದು, ದೂರುದಾರ ಸಂತ್ರಸ್ತರ ಗ್ರಾಮದವನೇ ಆಗಿದ್ದಾನೆ. ಹೀಗಾಗಿ ಆರೋಪಿಗೆ ಸಂತ್ರಸ್ತನ ಆರ್ಥಿಕ ಸ್ಥಿತಿ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದೇ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಸಂತ್ರಸ್ತ ಜ. 25 ರಂದು ಮಾರಾಟಕ್ಕಿಟ್ಟಿದ್ದ ಕಟ್ಟಡವನ್ನು ತೋರಿಸಲು ದಿಲ್ಯಾದ್ ಮತ್ತು ಸಿದ್ದಿಕ್ ನನ್ನನ್ನೂ ಮಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ.
ಮಂಗಳೂರು ನಗರದಲ್ಲಿ ರುಬಿನಾ ಕೂಡ ಇವರನ್ನು ಸೇರಿಕೊಂಡಿದ್ದು, ಒಟ್ಟು ನಾಲ್ಕು ಜನ ಹತ್ತಿರದ ರೆಸ್ಟೋರೆಂಟ್ ಗೆ ಉಪಹಾರಕ್ಕೆಂದು ತೆರಳಿದ್ದಾರೆ. ಚಹಾ ಸೇವಿಸುತ್ತಿದ್ದಾಗ ರುಬಿನಾಳನ್ನು ಒಬ್ಬಳನ್ನೆ ನನ್ನ ಬಳಿ ಬಿಟ್ಟು ಉಳಿದ ಮೂವರು ರೆಸ್ಟೋರೆಂಟ್ ನಿಂದ ಹೊರಟು ಹೋಗಿದ್ದಾರೆ.
ಆ ರೆಸ್ಟೋರೆಂಟ್ ನ ಮೊದಲ ಮಹಡಿಯಲ್ಲಿ ಲಾಡ್ಜ್ ಇದ್ದು, ಅಲ್ಲಿಗೆ ರುಬಿನಾ ನನ್ನನ್ನೂ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ನನ್ನನ್ನೂ ವಿವಸ್ತ್ರಗೊಳಿಸಿ ಎರಡು ಫೋಟೊ ತೆಗೆದಿದ್ದಾಳೆ. ಒಂದು ಫೋಟೊದಲ್ಲಿ ನಾನು ನಗ್ನವಾಗಿದ್ದು, ಇನ್ನೋಂದು ಫೋಟೊದಲ್ಲಿ ಆಕೆಯ ಜತೆ ನಿಂತು ಫೋಟೊ ತೆಗೆಸಿಕೊಂಡಿರುವುದಾಗಿ ಸಂತ್ರಸ್ತ ಮಾಹಿತಿ ನೀಡಿದ್ದಾರೆ.
ಹೀಗಾಗಿ ಲಾಡ್ಜ್ ಮಾಲೀಕನು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತನಗೆ ಶಂಕೆ ಇರುವುದಾಗಿ ಅವರು ಆರೋಪಿಸಿದ್ದಾರೆ. ಫೋಟೋ ತೆಗೆದ ಬಳಿಕ ಆರೋಪಿಗಳು ನನ್ನನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದು, ರೂ. 5 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಹಣ ನೀಡಲು ತಪ್ಪಿದಲ್ಲಿ ಫೋಟೊವನ್ನು ಕುಟುಂಬ ಸದಸ್ಯರ ಹಾಗೂ ನೆರೆಹೊರೆಯವರಿಗೆ ತೋರಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅವರ ಒತ್ತಡಕ್ಕೆ ಬಲಿಯಾಗಿ ನಾನು 10 ಸಾವಿರ ರೂಪಾಯಿಯನ್ನು ಗೂಗಲ್ ಪೇ ಮೂಲಕ ಹಾಗೂ ರೂ. 4, 90, 000 ನಗದಿನ ರೂಪದಲ್ಲಿ ನೀಡಿರುವುದಾಗಿ ಅವರು ವಿವರಿಸಿದ್ದಾರೆ.
ನಾಲ್ಕು ದಿನಗಳ ಬಳಿಕ ಅವರು ಮತ್ತೆ 30 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಈ ಸಂದರ್ಭ ನಾನು ಪೊಲೀಸರ ಮೊರೆ ಹೋಗಿರುವುದಾಗಿಯೂ ಅವರು ತಿಳಿಸಿದ್ದಾರೆ.




