ಬೆಂಗಳೂರು: ಕ್ಯಾಬ್ ನಲ್ಲಿ ಮಹಿಳೆ ಎದುರೇ ಹಸ್ತಮೈಥುನ ಮಾಡಿದ ಚಾಲಕ:
ಕಮಿಷನರ್ ಕಮಲ್ ಪಂತ್ ಗೆ ಟ್ವೀಟರ್ ಮೂಲಕ ದೂರು ನೀಡಿದ ಮಹಿಳೆ
ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರನ್ನು ಕ್ಯಾಬ್‌ನಲ್ಲಿ ಕರೆದೊಯ್ಯುವ ವೇಳೆ, ಅವರ ಎದುರೇ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
‘ಕಚೇರಿ ಕೆಲಸ ಮುಗಿಸಿಕೊಂಡು ಓಲಾ ಕ್ಯಾಬ್‌ನಲ್ಲಿ ರಾತ್ರಿ ಮನೆಗೆ ಹೊರಟಿದ್ದೆ. ಪ್ರಯಾಣದ ವೇಳೆಯಲ್ಲೇ ಚಾಲಕ ಅಸಭ್ಯವಾಗಿ ವರ್ತಿಸಿದ್ದ. ನನ್ನ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ’ ಎಂಬುದಾಗಿ ಮಹಿಳೆಯೊಬ್ಬರು, ಕಮಿಷನರ್ ಕಮಲ್ ಪಂತ್ ಅವರಿಗೆ ಟ್ವೀಟರ್ ಮೂಲಕ ದೂರು ನೀಡಿದ್ದಾರೆ.
‘ಚಾಲಕನ ವರ್ತನೆಯಿಂದ ಭಯವಾಗಿ, ಕಿರುಚಾಡಿದೆ. ಆತ, ಕ್ಯಾಬ್ ನಿಲ್ಲಿಸಿದ್ದ. ನಂತರ, ಕ್ಯಾಬ್‌ನಿಂದ ಇಳಿದು ಬೇರೊಂದು ಕ್ಯಾಬ್‌ನಲ್ಲಿ ಮನೆಗೆ ಬಂದೆ. ಈ ಘಟನೆಯಿಂದ ಬೆಂಗಳೂರು ಅಸುರಕ್ಷಿತ ಎನ್ನುವ ಭಾವ ಮೂಡಿದೆ’ ಎಂದೂ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಮಲ್ ಪಂತ್, ‘ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದ ತಂಡ, ಆರೋಪಿ ಬಂಧಿಸಲು ಈಗಾಗಲೇ ಕ್ರಮ ಕೈಗೊಂಡಿದೆ’ ಎಂದಿದ್ದಾರೆ.
ಕಂಪನಿಯಿಂದ ಮಾಹಿತಿ:
‘ಘಟನೆ ಬಳಿಕ ಚಾಲಕ ನಾಪತ್ತೆಯಾಗಿದ್ದಾನೆ. ಆತನ ಬಗ್ಗೆ ಓಲಾ ಕಂಪನಿಯಿಂದ ಮಾಹಿತಿ ಪಡೆದು, ವಿಚಾರಣೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.