ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ.ಡಿ. ಅಧಿಕಾರಿಗಳ ದಿಢೀರ್ ಭೇಟಿ, ಮಹತ್ವದ ಪರಿಶೀಲನೆ
ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಕೋಚಿಮುಲ್)ದಲ್ಲಿ ಇತ್ತೀಚೆಗೆ ನಡೆದ ಉದ್ಯೋಗಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆಯ ಮುಂದುವರಿದ ಭಾಗವಾಗಿ ಅಧಿಕಾರಿಗಳ ತಂಡ ಕೊಣಾಜೆಯಲ್ಲಿರುವ ಮಂಗಳೂರು ವಿ.ವಿ.ಗೆ ದಿಢೀರ್ ಆಗಮಿಸಿ ಮಹತ್ವದ ಪರಿಶೀಲನೆ ನಡೆಸಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ವಿ.ವಿ.ಗೆ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಶುಕ್ರವಾರ ಮುಂಜಾನೆ 4 ಗಂಟೆಯವರೆಗೂ ಮಹತ್ವದ ಪರಿಶೀಲನೆ ನಡೆಸಿದೆ.
ಕೋಚಿಮುಲ್ ನೇಮಕಾತಿ ಪ್ರಕ್ರಿಯೆಯ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟನೆ ಉಸ್ತುವಾರಿಯನ್ನು ಮಂಗಳೂರು ವಿ.ವಿ. ವಹಿಸಿಕೊಂಡಿತ್ತು. ಪ್ರಶ್ನೆಪತ್ರಿಕೆ ವಿಚಾರದಲ್ಲಿ ಕೆಲವು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ತಂಡ ಮಂಗಳೂರು ವಿ.ವಿ.ಗೆ ಆಗಮಿಸಿ ತನಿಖೆ ನಡೆಸಿದೆ ಎನ್ನಲಾಗುತ್ತಿದೆ.
ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವರ ಕಚೇರಿಯಲ್ಲಿ ಅಧಿಕಾರಿಗಳ ತಂಡ ಹಲವು ಹೊತ್ತು ಪರಿಶೀಲನೆ ನಡೆಸಿದ್ದಾರೆ. ಜತೆಗೆ ವಿ.ವಿ.ಯ ಕೆಲವು ವಿಭಾಗಗಳಿಗೂ ತೆರಳಿ ಪರಿಶೀಲನೆ ನಡೆಸಲಾಗಿದೆ.
ಗುರುವಾರ ರಾತ್ರಿಪೂರ್ತಿ ಅಧಿಕಾರಿಗಳು ವಿ.ವಿ.ಯಲ್ಲೇ ತನಿಖಾ ಕಾರ್ಯದಲ್ಲಿ ತೊಡಗಿದ್ದರು. ಹಲವು ಪ್ರಶ್ನೆಗಳನ್ನು ಮುಂದಿರಿಸಿ ತನಿಖೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.