ಮಂಗಳೂರು: ವಾಟರ್ ಮೆಟ್ರೊ ಯೋಜನೆಗೆ ಅನುಮೋದನೆ
ಮಂಗಳೂರು: ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲಿ ಅಂದಾಜು ₹ 1,600 ಕೋಟಿ ವೆಚ್ಚದಲ್ಲಿ ವಾಟರ್ ಮೆಟ್ರೊ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.
ಈಚೆಗೆ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಜಲ ಸಾರಿಗೆ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
ತ್ವರಿತವಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರಂಭಿಕ ಹಂತದಲ್ಲಿ ಬೆಂಗ್ರೆಯಿಂದ ಮಂಗಳೂರು, ಉಳ್ಳಾಲದಿಂದ ಮಂಗಳೂರು ಕಡೆಗೆ ಸುಸಜ್ಜಿತ ಜಲ ಸಾರಿಗೆ ವ್ಯವಸ್ಥೆಗೊಳಿಸಲು ಚರ್ಚಿಸಲಾಯಿತು.
ಈ ಬಗ್ಗೆ ಸಾಧ್ಯತಾ ವರದಿ ಸಿದ್ಧಪಡಿಸಿದ ನಂತರ ಪಿಪಿಪಿ ಅಥವಾ ಇನ್ನಾವುದೇ ರೀತಿಯಲ್ಲಿ ಅನುಷ್ಠಾನಗೊಳಿಸಲು ಮಂಡಳಿ ತೀರ್ಮಾನ ಕೈಗೊಳ್ಳಲಿದೆ.





