ಕಾಡುಕೋಣಗಳ ದಾಳಿಯಿಂದ ಕೃಷಿ ನಾಶ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ, ಕಾಡುಕೋಣ, ಕಾಡು ಹಂದಿ, ಚಿರತೆ ಇತ್ಯಾದಿ ಪ್ರಾಣಿಗಳ ಕಾಟ ಅಲ್ಲಲ್ಲಿ ವರದಿಯಾಗುತ್ತಿದೆ.
ದಟ್ಟಾರಣ್ಯಕ್ಕೆ ಸೀಮಿತವಾಗಿದ್ದ ಕಾಡುಕೋಣಗಳು ಜನವಸತಿ ಇರುವ ಪ್ರದೇಶಗಳಿಗೂ ದಾಳಿ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನಲ್ಲಿ ಭತ್ತದ ಗದ್ದೆಗೆ ಕಾಡುಕೋಣ ಲಗ್ಗೆ ಇಟ್ಟಿದೆ. ಜನ ವಸತಿ ಪ್ರದೇಶವಾಗಿದ್ದರಿಂದ ಗಾಬರಿಗೊಂಡ ಕಾಡುಕೋಣ ಅಡ್ಡಾ ದಿಡ್ಡಿ ಓಡಾಡಿ ಕೃಷಿ ನಾಶ ಮಾಡಿದೆ. ಕೇವಲ ಕಾಡುಕೋಣ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಅನೇಕ ಕಾಡುಪ್ರಾಣಿಗಳು ಭತ್ತದ ಕೃಷಿಯ ಮೇಲೆ ದಾಳಿ ಮಾಡುತ್ತಿರುವುದು ಕೃಷಿಕರನ್ನು ಕಂಗೆಡಿಸಿದೆ.