ಇನ್ಮುಂದೆ ಬಿ.ಸಿ ರೋಡಿನ ಎನ್.ಜಿ ಸರ್ಕಲ್ ನಲ್ಲಿ ಬಸ್ ನಿಲ್ಲಿಸುವಂತಿಲ್ಲ
ಬಂಟ್ವಾಳ: ಬಂಟ್ವಾಳ ಬಿ.ಸಿ ರೋಡಿನ ಎನ್.ಜಿ ಸರ್ಕಲ್ ನಲ್ಲಿ ಇನ್ನು ಮುಂದೆ ಬಸ್ ನಿಲ್ಲಿಸುವಂತಿಲ್ಲ, ಜನ ಹತ್ತಿಸುವುದು, ಇಳಿಸುವುದು ಮಾಡುವಂತಿಲ್ಲ ಎಂದು ಸಂಚಾರಿ ಪೊಲೀಸರು ಫಾರ್ಮಾನು ಹೊರಡಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಟ್ರಾಫಿಕ್ ಪೊಲೀಸರು. ಕಳೆದ ಕೆಲವು ದಿನಗಳಿಂದ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಬೆಳಿಗ್ಗೆ ಹಾಗೂ ಸಂಜೆಯ ಸಂಚಾರದಲ್ಲಿ ಬ್ಯುಸಿ ಇರುವ ಸಮಯದಲ್ಲಿ ಬಿ.ಸಿ ರೋಡಿನ ಎನ್.ಜಿ ಸರ್ಕಲ್ ನಲ್ಲಿ ಬೀಡು ಬಿಟ್ಟು ಖಾಸಗಿ ಮತ್ತು ಸರಕಾರಿ ಬಸ್ ಗಳು ಇಲ್ಲಿ ನಿಲುಗಡೆ ಮಾಡದಂತೆ ನೋಡಿಕೊಳ್ಳುತ್ತಿರುವುದಲ್ಲದೆ, ಇಲ್ಲಿ ಜನರನ್ನು ಹತ್ತಿಸುವುದು ಇಳಿಸುವುದು ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡುತ್ತಿದ್ದಾರೆ.
ಬಸ್ ಚಾಲಕರು ಅವೈಜ್ಞಾನಿಕ ರೀತಿಯಲ್ಲಿ ಮತ್ತು ಕಾನೂನು ಬಾಹಿರವಾದ ನಿಲುಗಡೆಯನ್ನು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ ರೋಡಿನ ಸರ್ಕಲ್ ನಲ್ಲಿ ನೀಡುವ ಪರಿಣಾಮವಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ, ಪುತ್ತೂರು ಮತ್ತು ಧರ್ಮಸ್ಥಳ ಕಡೆಯಿಂದ ಬರುವ ಹಾಗೂ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಜೊತೆಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪಘಾತಕ್ಕೆ ಅವಕಾಶವನ್ನು ನೀಡುತ್ತದೆ. ಹಾಗಾಗಿ ಇಲ್ಲಿ ಬಸ್ ಗಳು ನಿಲುಗಡೆ ನೀಡುವುದು ಅಪರಾಧವಾಗಿದೆ. ಕಾನೂನು ಪ್ರಕಾರ ಯಾವುದೇ ಸರ್ಕಲ್ ಬಳಿ ಬಸ್ ಗಳು ಜನರನ್ನು ಹತ್ತಿ, ಇಳಿಸುವುದು ಮಾಡುವಂತಿಲ್ಲ. ಕೂಗಳತೆಯ ದೂರದಲ್ಲಿ ಬಸ್ ನಿಲ್ದಾಣವಿದ್ದು, ಉದ್ದೇಶಪೂರ್ವಕವಾಗಿ ಬಸ್ ಚಾಲಕರು ನಿಲುಗಡೆ ನೀಡಿ ಸಮಸ್ಯೆಗಳಿಗೆ ಕಾರಣರಾಗುತ್ತಾರಾ? ಹೀಗೊಂದು ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪತ ಕಾಮಗಾರಿ ಕಾಮಗಾರಿ ನಡೆಯುತ್ತಿರುವ ಸಂದಿಗ್ಧ ಸಮಯದಲ್ಲಿ ಮತ್ತೆ ಬಸ್ ಗಳು ನಿಯಮ ಮೀರಿ ನಿಲುಗಡೆ ನೀಡಿ ಜನರ ಸಂಚಾರಕ್ಕೆ ಅಡ್ಡಿಪಡಿಸುವ ಕಾರ್ಯಗಳು ನಿತ್ಯ ನಡೆಯುತ್ತಿದೆ.
ಇಲ್ಲಿನ ಸರ್ಕಲ್ ವಾಹನ ಸಂದಣಿಯಿಂದ ಕೂಡಿ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಮುಕ್ತವಾಗಿ ಅವಕಾಶ ನೀಡುವ ಉದ್ದೇಶದಿಂದ ಬಸ್ ಗಳ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.





