ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಉವೈಸಿ ಬೋಧಿಸುವ ಪ್ರತಿಜ್ಞಾವಿಧಿ ಸ್ವೀಕರಿಸುವುದಿಲ್ಲ: ಟಿ.ರಾಜಾ ಸಿಂಗ್
ತೆಲಂಗಾಣ: ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಉವೈಸಿಯವರನ್ನು ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿ ರುವುದರಿಂದ ಅವರು ಬೋಧಿಸುವ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವುದಿಲ್ಲ ಎಂದು ನೂತನ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಘೋಷಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ರಾಜ್ಯಪಾಲರಾದ ತಮಿಳಿಸಾಯಿ ಸೌಂದರರಾಜನ್ ಅವರು ಅಕ್ಬರುದ್ದೀನ್ ಉವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದರು.
“ಈ ಹಿಂದೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ಎದುರು ನಾನು ಪ್ರಮಾಣ ವಚನ ಹೇಗೆ ಸ್ವೀಕರಿಸುವುದು? ಸ್ಪೀಕರ್ ನೇಮಕವಾದ ಬಳಿಕ ನಮ್ಮ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ನಾವು ಎಂದಿಗೂ ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ವಿಚಾರದ ಬಗ್ಗೆ ನಾವು ರಾಜ್ಯಪಾಲರ ಬಳಿ ಹೋಗುತ್ತೇವೆ” ಎಂದು ಗೋಶ್ಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಹೇಳಿದರು.
ಪೂರ್ಣಾವಧಿ ಸ್ಪೀಕರ್ ನೇಮಕ ಮಾಡಿದ ಬಳಿಕವಷ್ಟೇ ತಾವು ಪ್ರಮಾಣ ವಚನ ಸ್ವೀಕರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 2018ರಲ್ಲಿ ಎಐಎಂಐಎಂ ಪಕ್ಷಕ್ಕೆ ಸೇರಿದ ಹಂಗಾಮಿ ಸ್ಪೀಕರ್ ಇದ್ದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ಪ್ರಮಾಣವಚನ ಸ್ವೀಕರಿಸಿರಲಿಲ್ಲ.
ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿಗೂ ತಮ್ಮ ಹಿಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಂತೆಯೇ ಎಐಎಂಐಎಂ ಭಯವಿದೆ ಎಂದು ಟಿ ರಾಜಾ ಸಿಂಗ್ ಆರೋಪಿಸಿದ್ದಾರೆ.




