ICC T20 ಬೌಲಿಂಗ್ ರ‍್ಯಾಂಕಿಂಗ್:
ಅಗ್ರಸ್ಥಾನದಲ್ಲಿ ಸ್ಪಿನ್ನರ್ ರವಿ ಬಿಷ್ಣೋಯ್

ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಗೆದ್ದ ಭಾರತದ ಸ್ಪಿನ್ ಬೌಲರ್ ರವಿ ಬಿಷ್ಣೋಯ್ ಅವರು ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಶ್ರೇಯಾಂಕದಲ್ಲಿ ಬೌಲರ್ ಗಳ ಪಟ್ಟಿಯಲ್ಲಿ ರವಿ ಬಿಷ್ಣೋಯ್ 699 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಗ್ರ ಎರಡೂ ಸ್ಥಾನಗಳಲ್ಲಿ ಸ್ಪಿನ್ನರ್ ಗಳೇ ಇರುವುದು ವಿಶೇಷ.
ಭಾರತದ ಇನ್ನೋರ್ವ ಸ್ಪಿನ್ನರ್ ಅಕ್ಷರ್ ಪಟೇಲ್ 16 ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ ಇತ್ತೀಚಿನ ಐಸಿಸಿ ಟಿ 20 ಬ್ಯಾಟರ್ಸ್ ಶ್ರೇಯಾಂಕದಲ್ಲಿ ಅತಿದೊಡ್ಡ ಪ್ರಗತಿ ಕಂಡಿದ್ದು 16 ಸ್ಥಾನಗಳನ್ನು ಮೇಲಕ್ಕೇರಿ 19 ನೇ ಸ್ಥಾನಕ್ಕೆ ತಲುಪಿದ್ದಾರೆ.