ಕೊಪ್ಪಳ: ಜೈ ಶ್ರೀರಾಮ್ ಹೇಳುವಂತೆ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಮಧ್ಯರಾತ್ರಿ ಮನೆಗೆ ಹೋಗುವಾಗ ಅಂಧ ವ್ಯಕ್ತಿಯ ಮೇಲೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ, ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಬಗ್ಗೆ ಮೆಹಬೂಬ್ ನಗರದ ಹುಸೇನ್ ಸಾಬ್ ಎಂಬವರು ನೀಡಿರುವ ದೂರಿನಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ನ 25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದೆ. ಆಗ ಬೈಕ್ ಮೇಲೆ ಬಂದ ಕೆಲವು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದರು. ಬಲವಂತವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನೆಲದ ಮೇಲೆ ಬೀಳಿಸಿ ಹಲ್ಲೆ ಮಾಡಿದ ಯುವಕರ ಗುಂಪು ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದೆ. ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣ ದೋಚಿಕೊಂಡು ಹೋಗಿದ್ದಾರೆ. ಬಳಿಕ ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನನ್ನು ರಕ್ಷಣೆ ಮಾಡಿ ಮನೆಗೆ ತಲುಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಗುರುವಾರ ರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಮುಸ್ಲಿಂ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




