ಅಪಘಾತ ಆದಾಗ ಗಾಯಾಳುವಿನ ಜೀವ ಉಳಿಸಲು ನನ್ನ ಪ್ರಥಮ ಆದ್ಯತೆ: ಚಾರ್ಮಾಡಿ ಹಸನಬ್ಬ
ಮಂಗಳೂರು: ಅಪಘಾತ ಆದಾಗ ಗಾಯಾಳುವಿನ ಜೀವ ಉಳಿಸಲು ನನ್ನ ಪ್ರಥಮ ಆದ್ಯತೆ. ಅದು ನನ್ನ ಮನಸ್ಸಿಗೆ ಸಾಮಾಧಾನ ನೀಡುವ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ನನ್ನಿಂದ ಆದ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಈ ಕಾರ್ಯವನ್ನು ನೆನಪಿಟ್ಟು ಮತ್ತೆ ಬಂದು ನನಗೆ ಕೃತಜ್ಞತೆ ಹೇಳುವಾಗ ನನ್ನ ಕಾರ್ಯ ಸಾರ್ಥಕ ಅನ್ನಿಸಿದೆ. ಅದು ನನಗೆ ದೊರಕಿದ ಬಹುದೊಡ್ಡ ಸನ್ಮಾನ. ಇದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಆಯೋಜಿಸಲಾದ ‘ಪ್ರೆಸ್‌ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ತಮ್ಮ ಅನಿಸಿಕೆ ಹಂಚಿಕೊಂಡರು. ಮನುಷ್ಯನಿಗೆ ಬೇಕಿರುವುದು ಮಾನವೀಯತೆ. ಎಲ್ಲೇ ಅಪಘಾತ ನಡೆಯಲಿ, ಕೂಡಲೇ ಧಾವಿಸಿ ಗಾಯಾಳುವನ್ನು ಉಪಚರಿಸಿ ಜೀವ ಉಳಿಸುವ ಮಾನವ ಧರ್ಮ ಎಲ್ಲರಲ್ಲೂ ಮೂಡಿಬರಬೇಕು. ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಉಪಚರಿಸಿ ಪ್ರಾಣ ಉಳಿಸುವ ಕಾರ್ಯ ಮಾಡಬೇಕೇ ಹೊರತು ಫೋಟೋ ತೆಗೆಯುವುದು, ಜಗಳ ಮಾಡುತ್ತಾ ಕೂರುವುದು ಸರಿಯಲ್ಲ ಎಂದವರು ಅಭಿಪ್ರಾಯಿಸಿದರು.