ನೇಜಾರು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ನರಹಂತಕನಿಗೆ ಜೈಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ, ಇಬ್ಬರು ಪೊಲೀಸರ ನಿಯೋಜನೆ
ಉಡುಪಿ: ಇಲ್ಲಿನ ನೇಜಾರು ತೃಪ್ತಿ ನಗರದಲ್ಲಿ ನವೆಂಬರ್ 12 ರಂದು ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್‌ಪಿ ಡಾ. ಅರುಣ್ ಕೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
“ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಗೆ ಎಂಟು ತಿಂಗಳಿನಿಂದ ಪರಿಚಯವಿತ್ತು. ಆದರೆ ಒಂದು ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹೀಗಾಗಿ ಪ್ರವೀಣ್ ಪೊಸೆಸಿವ್ ನೆಸ್ ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ” ಎಂದು ಮಾಹಿತಿ ನೀಡಿದರು.
ಪ್ರವೀಣ್ ಅಂದು ಆರಂಭದಲ್ಲಿ ಅಯ್ನಾಝ್ ಗೆ ಮೊದಲು ದಾಳಿ ಮಾಡುತ್ತಾನೆ. ಹಸೀನಾ, ಅಫ್ನಾನ್, ಆಸಿಂ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ. ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ ಎಂದರು.
ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ. ಗಂಭೀರ ಪ್ರಕರಣವಾಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಎಸ್.ಪಿ ಹೇಳಿದರು.